ಮೋದಿ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡುವೆ ಇತ್ತೀಚೆಗೆ ಅರ್ಥವ್ಯವಸ್ಥೆ ಹಾಗೂ ಹಣಕಾಸು ಬಳಕೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿದ್ದ ಸಂಘರ್ಷಕ್ಕೆ ಸೋಮವಾರ ಸದ್ಯದ ಮಟ್ಟಿಗೆ ತೆರೆ ಬಿದ್ದಿದೆ.
ಮುಂಬೈ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡುವೆ ಇತ್ತೀಚೆಗೆ ಅರ್ಥವ್ಯವಸ್ಥೆ ಹಾಗೂ ಹಣಕಾಸು ಬಳಕೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿದ್ದ ಸಂಘರ್ಷಕ್ಕೆ ಸೋಮವಾರ ಸದ್ಯದ ಮಟ್ಟಿಗೆ ತೆರೆ ಬಿದ್ದಿದೆ. ತನ್ನ ಬಳಿ ಇರುವ ಹೆಚ್ಚುವರಿ
9.69 ಲಕ್ಷ ಕೋಟಿ ರುಪಾಯಿ ಮೀಸಲು ನಗದನ್ನು ಬಳಕೆ ಮಾಡುವ ಸಂಬಂಧ ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್ ಒಪ್ಪಿಕೊಂಡಿದೆ. ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ.
ಇದೇ ವೇಳೆ, ಇತ್ತೀಚಿನ ಅಪನಗದೀಕರಣದ ವೇಳೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಮೇಲೆ ಸಾಲ ನೀಡಿಕೆ ನಿರ್ಬಂಧ ಹೇರಲಾಗಿತ್ತು. ಇದನ್ನು ಸಡಿಲಗೊಳಿಸಿ 25 ಕೋಟಿ ರುಪಾಯಿಯವರೆಗೆ ಸಾಲ ನೀಡಬೇಕು ಎಂಬ ಆರ್‌ಬಿಐ ಮಂಡಳಿಯ ಸಲಹೆಯನ್ನು ಪರಿಶೀಲಿಸಲು ಕೂಡ ರಿಸರ್ವ್ ಬ್ಯಾಂಕ್ ಒಪ್ಪಿಕೊಂಡಿದೆ.
ಇನ್ನು ಸರ್ಕಾರಿ ಬಾಂಡ್‌ಗಳನ್ನು ಖರೀದಿ ಮಾಡಿ ಅರ್ಥವ್ಯವಸ್ಥೆಗೆ 8 ಸಾವಿರ ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಲು ಆರ್‌ಬಿಐ ಸಮ್ಮತಿಸಿದೆ. ಹಾಗೆಯೇ ವಸೂಲಾಗದ ಸಾಲ ಹೆಚ್ಚಾದ ಪರಿಣಾಮ, ಸಾಲ ನೀಡಿಕೆ ಹಾಗೂ ಲಾಭಾಂಶ ನೀಡಿಕೆಯ ಮೇಲೆ ಆರ್‌ಬಿಐ 11 ಬ್ಯಾಂಕ್‌ಗಳ ಮೇಲೆ ಕಟ್ಟಳೆ ಹೇರಿತ್ತು. ಇದನ್ನು ಮರುಪರಿಶೀಲಿಸಲು ಕೇಂದ್ರೀಯ ಬ್ಯಾಂಕ್ ಒಪ್ಪಿದೆ. ಆರ್ಥಿಕ ತಜ್ಞ ಎಸ್. ಗುರುಮೂರ್ತಿ ಸೇರಿದಂತೆ ಸರ್ಕಾರದಿಂದ ನೇಮಕವಾದ ಪ್ರತಿನಿಧಿಗಳು ಹಾಗೂ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್, ಉಪ ಗವವರ್ನರ್ ವಿರಳ್ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಆರ್‌ಬಿಐ ಮಂಡಳಿ ಸಭೆ ಸೋಮವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಸುಮಾರು 9 ತಾಸು ನಡೆದು, ಈ ಮಹತ್ವದ ತೀರ್ಮಾನ ಗಳನ್ನು ತೆಗೆದುಕೊಂಡಿತು.
ಕೇಂದ್ರ ಸರ್ಕಾರವು ತನ್ನ ನಿರ್ಧಾರಗಳನ್ನು ಹೇರುತ್ತ ತನ್ನ ಸ್ವಾಯತ್ತೆಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿದೆ ಎಂದು ಆರ್‌ಬಿಐ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿತ್ತು ಹಾಗೂ ಹೆಚ್ಚುವರಿ ಮೀಸಲು ನಗದಿನ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದ್ದ ಬಗ್ಗೆ ಆರ್‌ಬಿಐ ಆಕ್ರೋಶಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಮಂಡಳಿಯ ಸಭೆಗೆ ವಿಶೇಷ ಮಹತ್ವ ಪ್ರಾಪ್ತಿಯಾಗಿತ್ತು.
ಮೀಸಲು ನಗದು ಬಳಕೆ ಅಧ್ಯಯನ: ಆದರೆ ‘ಮ್ಯಾರಥಾನ್ ಸಭೆ’ಯಲ್ಲಿ ಹೆಚ್ಚೂ ಕಡಿಮೆ ಕದನವಿರಾಮ ಸಾರುವ ನಿರ್ಣಯಗಳು ಹೊರಬಿದ್ದಿವೆ. ಆರ್‌ಬಿಐ ಬಳಿ 9.69 ಲಕ್ಷ ಕೋಟಿ ರುಪಾಯಿ ಹೆಚ್ಚುವರಿ ಮೀಸಲು ನಗದು ಇದೆ. ಇದನ್ನು ತುರ್ತು ಸಂದರ್ಭಗಳಲ್ಲಿ ಬಳಸಬೇಕು ಎಂಬ ಇರಾದೆ ರಿಸರ್ವ್ ಬ್ಯಾಂಕ್‌ನದ್ದು. ಆದರೆ ಇತ್ತೀಚೆಗೆ ಈ ಮೀಸಲು ಹಣದ ಪೈಕಿ 3.6 ಲಕ್ಷ ಕೋಟಿ ರು. ಗಳನ್ನು ಜನಕಲ್ಯಾಣ ಯೋಜನೆಗಳಿಗಾಗಿ ಬಳಸಲು ನೀಡಿ ಎಂದು ಬ್ಯಾಂಕನ್ನು ಕೇಂದ್ರ ಸರ್ಕಾರ ಕೋರಿತ್ತು ಎನ್ನಲಾಗಿತ್ತು. ಇದಕ್ಕೆ ಆರ್‌ಬಿಐ ಅಸಮ್ಮತಿ ವ್ಯಕ್ತಪಡಿಸಿ, ತುರ್ತು ಸಂದರ್ಭದಲ್ಲಿ ಮಾತ್ರ ತಾನು ಈ ಹಣ ನೀಡುವುದಾಗಿ ತಿಳಿಸಿತ್ತು.
ಆದರೆ ಸರ್ಕಾರದ ಪ್ರತಿನಿಧಿಗಳು ಇರುವ ಮಂಡಳಿಯ ಸದಸ್ಯರ ಸಲಹೆಯನ್ನು ಸೋಮವಾರದ ಸಭೆಯಲ್ಲಿ ಮನ್ನಿಸಿದ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರು , 9.69 ಲಕ್ಷ ಕೋಟಿ ರು. ಹೆಚ್ಚುವರಿ ಮೀಸಲು ನಗದನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದನ್ನು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲು ಒಪ್ಪಿಕೊಂಡರು.