ವಕೀಲರ ತಿದ್ದುಪಡಿ ಮಸೂದೆ-2017 ವಿರೋಧಿಸಿ ನಾಳೆ ಪ್ರತಿಭಟನೆ

By Suvarna Web DeskFirst Published Mar 30, 2017, 5:04 PM IST
Highlights

 ರಾಷ್ಟ್ರೀಯ ಕಾನೂನು ಆಯೋಗ ಶಿಫಾರಸು ಮಾಡಿರುವ ‘ವಕೀಲರ ತಿದ್ದುಪಡಿ ಮಸೂದೆ-2017’ಅನ್ನು ವಿರೋಧಿಸಿ ನಾಳೆ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಕರ್ನಾಟಕ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲ ಸಂಘ ನಿರ್ಧರಿಸಿವೆ.

ಬೆಂಗಳೂರು (ಮಾ.30):  ರಾಷ್ಟ್ರೀಯ ಕಾನೂನು ಆಯೋಗ ಶಿಫಾರಸು ಮಾಡಿರುವ ‘ವಕೀಲರ ತಿದ್ದುಪಡಿ ಮಸೂದೆ-2017’ಅನ್ನು ವಿರೋಧಿಸಿ ನಾಳೆ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಕರ್ನಾಟಕ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲ ಸಂಘ ನಿರ್ಧರಿಸಿವೆ.

ವಕೀಲರ ಕಾಯ್ದೆ-1961 ಕ್ಕೆ ಕೆಲವೊಂದು ತಿದ್ದುಪಡಿ ತರಲು ರಾಷ್ಟ್ರೀಯ ಕಾನೂನು ಆಯೋಗವು ‘ವಕೀಲರ ತಿದ್ದುಪಡಿ ವಸೂದೆ-2017’ ಸಿದ್ಧಪಡಿಸಿದೆ. ಆದರೆ, ತಿದ್ದುಪಡಿ ಮಸೂದೆಯಲ್ಲಿ ವಕೀಲರ ವೃತ್ತಿ ಮತ್ತು ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಹ ಹಲವು ನಿಯಮ ಸೇರಿಸಲಾಗಿದೆ. ಇದನ್ನು ಖಂಡಿಸಿ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯಾದ್ಯಂತ ವಕೀಲರಿಗೆ ಕರೆ ನೀಡಲಾಗಿದೆ ಎಂದು ರಾಜ್ಯ ವಕೀಲರ ಪರಿಷತ್ ಸಹ ಅಧ್ಯಕ್ಷ ವೈ.ಆರ್. ಸದಾಶಿವರೆಡ್ಡಿ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ. ಶಿವರಾಮು ಗುರುವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಾಶಿವರೆಡ್ಡಿ ಅವರು, ಪ್ರಕರಣವೊಂದರ ಕಾನೂನು ಸಮರದಲ್ಲಿ ತಮಗೆ ನ್ಯಾಯ ದೊರಕಿಸಿಕೊಡದ ವಕೀಲನ ವಿರುದ್ಧ ಕಕ್ಷಿದಾರ ದೂರು ನೀಡಬಹುದು. ಆ ದೂರನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಐವರು ಸದಸ್ಯರ ಸಮಿತಿ ವಿಚಾರಣೆ ನಡೆಸಲಿದೆ. ಒಂದೊಮ್ಮೆ ದುರುದ್ದೇಶದಿಂದ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸಿಲ್ಲ ಎಂದು ವಿಚಾರಣೆಯಲ್ಲಿ ಸಾಬೀತಾದರೆ, ತಪ್ಪಿತಸ್ಥ ವಕೀಲನು ತಮ್ಮ ಕಕ್ಷಿದಾರನಿಗೆ 3 ಲಕ್ಷ ರು. ದಂಡ ಹಾಗೂ 5 ಲಕ್ಷ ರು.ವರೆಗೆ ಪರಿಹಾರ ನೀಡಬೇಕು ಎಂಬ ಅಂಶವನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. ಇದು ವಕೀಲರಿಗೆ ಮಾರಕವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ವಕೀಲರ ಪರಿಷತ್ತು ಆಡಳಿತ ಮಂಡಳಿಗೆ ಲೆಕ್ಕ ಪರಿಶೋಧಕರು, ವಾಣಿಜ್ಯ, ಸಾರ್ವಜನಿಕ ವ್ಯವಹಾರಗಳು, ಸಾಮಾಜಿಕ ವಿಜ್ಞಾನ, ಮ್ಯಾನೇಜ್‌ಮೆಂಟ್ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರಗಳ ತಜ್ಞರನ್ನು ಸುಪ್ರೀಂಕೋರ್ಟ್ ಮೂಲಕ ನಾಮನಿರ್ದೇಶನ ಮಾಡಲು ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಇನ್ನು ವಕೀಲರು ಪ್ರತಿಭಟನೆ ನಡೆಸಬಾರದು ಮತ್ತು ಕಲಾಪ ಬಹಿಷ್ಕರಣೆ ಸೇರಿದಂತೆ ಯಾವುದೇ ರೀತಿ ಕೋರ್ಟ್ ಕಾರ್ಯಗಳಿಗೆ ವಕೀಲರು ವೈಯಕ್ತಿಕ ಮತ್ತು ಸಂಘಟಿತವಾಗಿ ಅಡ್ಡಿಪಡಿಸುವಂತಿಲ್ಲ ಎಂದು ನಿಯಮ ರೂಪಿಸಲಾಗಿದೆ. ಇದು ವಕೀಲರ ಮೂಲಭೂತ ಹಕ್ಕು ಕಸಿದುಕೊಳ್ಳುತ್ತದೆ ಎಂದು ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ವಕೀಲರಾದ ಜೈಕುಮಾರ್ ಎಸ್.ಪಾಟೀಲ ಹಾಗೂ ಸಿ.ಆರ್. ಗೋಪಾಲಸ್ವಾಮಿ ಉಪಸ್ಥಿತರಿದ್ದರು.

ತಿದ್ದುಪಡಿ ಮಸೂದೆಯಲ್ಲಿ ವಕೀಲರಿಗೆ ಮಾರಕವಾಗುವಂತಹ ಅನೇಕ ನಿಯಮ ಸೇರಿಸಲಾಗಿದೆ. ಇದು ಖಂಡನೀಯ. ಮಸೂದೆ ಜಾರಿಗೆ ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಎಲ್ಲಾ ವಕೀಲರ ಪರಿಷತ್ತು ಹಾಗೂ ವಕೀಲರ ಸಂಘಗಳಿಗೆ ಅಖಿಲ ಭಾರತ ವಕೀಲರ ಪರಿಷತ್ತು ಕರೆ ನೀಡಿದೆ. ಆ ನಿರ್ಧಾರಕ್ಕೆ ಬೆಂಗಳೂರು ವಕೀಲರ ಸಂಘ ಸೇರಿದಂತೆ ರಾಜ್ಯದಲ್ಲಿರುವ ೧೮೯ ವಕೀಲರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ. ಅದರಂತೆ ಶುಕ್ರವಾರ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು ವಕೀಲರು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಿದ್ದಾರೆ.

- ಎಚ್.ಸಿ. ಶಿವರಾಮು, ಬೆಂಗಳೂರು ವಕೀಲರ ಸಂಘ

click me!