ಇಂದು 'ಗೌರಿ ದಿನ'; ಅಕ್ಕನ ಸಾವಿನ ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಲು ಇಂದ್ರಜಿತ್ ನಿರ್ಧಾರ

By Suvarna Web DeskFirst Published Jan 29, 2018, 11:33 AM IST
Highlights

ಗೌರಿ ಲಂಕೇಶ್ ಈಗ ನೆನಪು ಮಾತ್ರ.  ಚಿಕ್ಕವರಿರುವಾಗ ಹುಟ್ಟುಹಬ್ಬ ಆಚರಣೆ ಮಾಡ್ತಾ ಇದ್ವಿ. ಆದರೆ ಗೌರಿ ಪತ್ರಕರ್ತೆಯಾದ ಮೇಲೆ ಹುಟ್ಟುಹಬ್ಬ ಮಾಡಿಕೊಳ್ತಾ ಇರಲಿಲ್ಲ. ಆದರೆ ಎಲ್ಲರೂ ಜೊತೆಗೆ ಸೇರುತ್ತಿದ್ದೆವು.  ಇವತ್ತು ಅಕ್ಕ ಇಲ್ಲದೆ ನಮ್ಮ ಮನೇಲಿ ಸಂಭ್ರಮವಿಲ್ಲ ಮನೆಯಲ್ಲಿ ನಿತ್ಯ ಅಮ್ಮ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಬೆಂಗಳೂರು (ಜ.29): ಗೌರಿ ಲಂಕೇಶ್ ಈಗ ನೆನಪು ಮಾತ್ರ.  ಚಿಕ್ಕವರಿರುವಾಗ ಹುಟ್ಟುಹಬ್ಬ ಆಚರಣೆ ಮಾಡ್ತಾ ಇದ್ವಿ. ಆದರೆ ಗೌರಿ ಪತ್ರಕರ್ತೆಯಾದ ಮೇಲೆ ಹುಟ್ಟುಹಬ್ಬ ಮಾಡಿಕೊಳ್ತಾ ಇರಲಿಲ್ಲ. ಆದರೆ ಎಲ್ಲರೂ ಜೊತೆಗೆ ಸೇರುತ್ತಿದ್ದೆವು.  ಇವತ್ತು ಅಕ್ಕ ಇಲ್ಲದೆ ನಮ್ಮ ಮನೇಲಿ ಸಂಭ್ರಮವಿಲ್ಲ ಮನೆಯಲ್ಲಿ ನಿತ್ಯ ಅಮ್ಮ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಇಂದು ಗೌರಿ ಲಂಕೇಶ್ ಅವರ ಜನ್ಮದಿನ. ಜನ್ಮದಿನದ ಅಂಗವಾಗಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ‘ಗೌರಿ ದಿನ’ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಅಕ್ಕನನ್ನು ನೆನೆಸಿಕೊಂಡು ಭಾವುಕರಾದರು.

ನಾನು ಇಷ್ಟು ದಿನ ನ್ಯಾಯ ಸಿಗುತ್ತೆ ಅಂತ ಸಂಯಮದಿಂದ ಕಾದಿದ್ದೆ. ಆದರೆ ಇವತ್ತು  ಗೌರಿ ಹುಟ್ಟುಹಬ್ಬದಂದು ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದೇನೆ. ಕೊಲೆಗಡುಕರನ್ನು ಹುಡುಕೋದು ಬಿಟ್ಟು ರಾಜಕೀಯ ಬೇಳೆ ಬೇಯಿಸ್ಕೊಳ್ಳೋದು ಸರಿಯಲ್ಲ. ಯಾರೋ ಒಬ್ಬ ಬೈಕಲ್ಲಿ ಹೋಗುತ್ತಿದ್ದವನಿಗೆ ಕುಂಕುಮ ಇಟ್ಟು ರಾಜಕೀಯ ಆಟವಾಡೋದು ಸರಿಯಲ್ಲ. ನಾನು ಸಿಎಂ ಜೊತೆ ಚರ್ಚೆ ಮಾಡಿಲ್ಲ ಎಂದು ಇಂದ್ರಜಿತ್ ಹೇಳಿದ್ದಾರೆ.

ಇಂದು  ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ದ್ವೇಷ ರಾಜಕಾರಣ, ಗೌರಿ ಲಂಕೇಶ್ ಬದುಕು, ಬರಹ, ಹತ್ಯೆ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಕಾರ್ಯಕ್ರಮದಲ್ಲಿ ನಡೆಯಲಿರುವ ‘ನಾಡು ಕಂಡ ಹಾಗೆ ನಮ್ಮ ಗೌರಿ’ ಎಂಬ ಮೊದಲ ಗೋಷ್ಠಿಯನ್ನು ಸಂವಿಧಾನದ ಆಶಯಗಳ ರಕ್ಷಣೆ ಪ್ರತಿಜ್ಞೆ ಸ್ವೀಕರಿಸುವ  ಮೂಲಕ ಉದ್ಘಾಟನೆ ಮಾಡಲಾಗುತ್ತದೆ.

ಗೋಷ್ಠಿಯ ಅಧ್ಯಕ್ಷತೆಯನ್ನು ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸ್ವಾತಂತ್ರ್ಯ  ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಹಿಸಿಸಲಿದ್ದಾರೆ. ಗೌರಿ ಲಂಕೇಶ್‌'ರ ಸಹೋದರಿ ಕವಿತಾ ಲಂಕೇಶ್, ನಟ ಪ್ರಕಾಶ್ ರೈ, ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ  ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮುಖ್ಯ ಭಾಷಣ ಮಾಡಲಿದ್ದಾರೆ.

ಗೌರಿ ಲಂಕೇಶ್ ಕುರಿತಾದ ಕವನ ಸಂಕಲನಗಳಾದ ‘ನಾನು ಗೌರಿ’, ‘ಉರಿಯ ಬೆಳದಿಂಗಳು’ ಹಾಗೂ ಗೌರಿ  ಬರೆದ ಮತ್ತು ಗೌರಿಯ ಬಗ್ಗೆ ಬರೆಯಲಾದ ‘ಗೌರಿ ಹೂ’ ಎಂಬ ಲೇಖನಗಳ ಸಂಗ್ರಹ ಲೋಕಾರ್ಪಣೆಗೊಳ್ಳಲಿವೆ.

‘ಗೌರಿ ಕಂಡ ಕನಸು-ಭವಿಷ್ಯದ ಭಾರತ’ ಎಂಬ ಎರಡನೇ ಗೋಷ್ಠಿಯ  ಅಧ್ಯಕ್ಷತೆಯನ್ನು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಎನ್.ಮುನಿಸ್ವಾಮಿ ವಹಿಸಲಿದ್ದು, ಹೈದ್ರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಅವರ ತಾಯಿ  ರಾಧಿಕಾ ವೇಮುಲ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾನವ ಹಕ್ಕುಗಳ  ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್ ಅವರು ಗೋಷ್ಠಿಯ ಸಮನ್ವಯಕಾರರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಅವರು ಹೆಮ್ಮೆಯಿಂದ ತನ್ನ ಮಕ್ಕಳು ಎಂದು ಹೇಳಿಕೊಳ್ಳುತ್ತಿದ್ದ ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಜೆಎನ್‌ಯು ವಿದ್ಯಾರ್ಥಿ ನಾಯಕರಾದ  ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್, ಉಮರ್ ಖಾಲೀದ್, ಅಲಹಾಬಾದ್ ವಿದ್ಯಾರ್ಥಿ ನಾಯಕರಾದ ರೀಚಾಸಿಂಗ್, ಕರ್ನಾಟಕ ಜನ ಶಕ್ತಿ ಸಂಘಟನೆಯ ಮುಖಂಡ ಡಾ.ವಾಸು, ಲೇಖಕ ವಿಕಾಸ್  ಮೌರ್ಯ, ಪತ್ರಕರ್ತ ಕುಮಾರ್  ಬುರಡುಕಟ್ಟಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

 

click me!