
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಪ್ರಕಟಿಸುವ ಪ್ರಕ್ರಿಯೆಯನ್ನು ಹೈಕಮಾಂಡ್ ಆರಂಭಿಸುವ ದಿನ ಸಮೀಪಿಸುತ್ತಿರುವಂತೆಯೇ ಆಕಾಂಕ್ಷಿಗಳಲ್ಲಿ ಟಿಕೆಟ್ಗಾಗಿ ಲಾಬಿ ತೀವ್ರಗೊಂಡಿದೆ. ವಿಶೇಷವಾಗಿ ಪ್ರಮುಖ ನಾಯಕರು ತಮ್ಮ ಹಿಂಬಾಲಕರಿಗೆ ಟಿಕೆಟ್ ಕೊಡಿಸಲು ಹೈಕಮಾಂಡ್ನ ಮುಖ್ಯ ಮುಖಂಡರ ಮೇಲೆ ಪ್ರಭಾವ ಬೀರುವ ಪ್ರಯತ್ನ ಆರಂಬಿಸಿದ್ದಾರೆ.
ಮೂಲಗಳ ಪ್ರಕಾರ ಸುಮಾರು 120ರಿಂದ 150 ಮಂದಿಯ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಏ.15ರೊಳಗೆ (ಘೋಷಣೆ 14ಕ್ಕೆ ಹೊರಬೀಳಬಹುದು ಎನ್ನಲಾಗುತ್ತಿದೆ) ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಏ.8 ಹಾಗೂ 9ರಂದು ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆ ದೆಹಲಿಯಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ಅಂದರೆ 12 ಹಾಗೂ 13ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸುಮಾರು 120ರಿಂದ 150 ಮಂದಿ ಅಭ್ಯರ್ಥಿಗಳ ಹೆಸರು ಅಖೈರುಗೊಳ್ಳುವುದು ಖಚಿತ ಎಂದೇ ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ನಾಯಕರು ತಮ್ಮ ಹಿಂಬಾಲಕರಿಗೆ ಟಿಕೆಟ್ ಕೊಡಿಸಲು ತೀವ್ರ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೋಮವಾರ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ಹಲವು ಪ್ರಮುಖ ನಾಯಕರು ಭೇಟಿ ಮಾಡಿ ತಮ್ಮ ಜಿಲ್ಲೆಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಹಾಗೂ ಯಾರಿಗೆ ಟಿಕೆಟ್ ನೀಡಬಾರದು ಎಂದು ನೇರಾನೇರ ಪ್ರಭಾವ ಬೀರಲು ಯತ್ನಿಸಿದ್ದು ಕುತೂಹಲಕರವಾಗಿತ್ತು.
ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಎ. ಮಂಜು ಸೇರಿದಂತೆ ಹಲವು ನಾಯಕರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತನಾಡಿದರು. ಅಲ್ಲದೆ, ಹತ್ತಾರು ಮಂದಿ ಟಿಕೆಟ್ ಆಕಾಂಕ್ಷಿಗಳು ಸಹ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು.
ಈ ನಡುವೆ ಕೆಪಿಸಿಸಿಯು ಸುಮಾರು 150 ಕ್ಷೇತ್ರಗಳಿಗೆ ಪ್ಯಾನೆಲ್ ಸಿದ್ಧಪಡಿಸಿದೆ. ಈ ಪ್ಯಾನೆಲ್ ಅನ್ನು ಶೀಘ್ರವೇ ಹೈಕಮಾಂಡ್ಗೆ ತಲುಪಿಸಲಿದೆ. ಆದರೆ, ಈ ಪ್ಯಾನೆಲ್ ಬಗ್ಗೆಯೇ ಹಲವು ಪ್ರಮುಖ ನಾಯಕರಿಗೆ ಅಸಮಾಧಾನವಿದ್ದು, ಇಂತಹ ನಾಯಕರ ಪೈಕಿ ಕೆಲವರು ನೇರವಾಗಿ ವೇಣುಗೋಪಾಲ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದರೆ ಮತ್ತೆ ಕೆಲವರು ನೇರವಾಗಿ ಹೈಕಮಾಂಡ್ನ ಪ್ರಭಾವಿ ನಾಯಕರ ಬಳಿಗೆ ದೂರು ಒಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.