ಮಧ್ಯಪ್ರದೇಶದಲ್ಲಿ ಗೆದ್ದರೂ ಕಾಂಗ್ರೆಸ್ಸಿಗೆ ಇವಿಎಂ ಮೇಲೆ ಡೌಟ್‌!

By Web DeskFirst Published Dec 17, 2018, 8:12 AM IST
Highlights

ವಿಂಧ್ಯ ವಲಯದಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ| ಎಕ್ಸಿಟ್‌ ಪೋಲ್‌ ರೀತಿ 30 ಕ್ಷೇತ್ರಗಳಲ್ಲಿ ಸಮೀಕ್ಷೆಗೆ ನಿರ್ಧಾರ: ಕಮಲ್‌| ವರದಿ ಬಂದ ಬಳಿಕ ಆಯೋಗ, ಕೋರ್ಟ್‌ಗೆ ಹೋಗುವ ತೀರ್ಮಾನ

ಭೋಪಾಲ್‌[ಡಿ.17]: ವಿಧಾನಸಭೆ ಚುನಾವಣೆಗಳಲ್ಲಿ ಸೋತಾಗ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್‌ ಇದೀಗ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುತ್ತಿದ್ದರೂ ಇವಿಎಂಗಳ ಮೇಲೆ ಸಂದೇಹ ಪಡುತ್ತಿದೆ. ತನ್ನ ಈ ಅನುಮಾನ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಕ್ಸಿಟ್‌ ಪೋಲ್‌ ರೀತಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ.

ಕಾಂಗ್ರೆಸ್ಸಿಗೆ ಮಧ್ಯಪ್ರದೇಶದ ವಿಂಧ್ಯ ವಲಯದಲ್ಲಿನ ಇವಿಎಂಗಳ ಬಗ್ಗೆ ಭಾರಿ ಶಂಕೆ ಇದೆ. ಆ ವಲಯದಲ್ಲಿ 30 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ ಕಳೆದ ಬಾರಿ 12ರಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಕೇವಲ 6 ಸ್ಥಾನಗಳಷ್ಟೇ ಸಿಕ್ಕಿವೆ. ಪ್ರತಿಪಕ್ಷ ನಾಯಕರಾಗಿದ್ದ ಅಜಯ್‌ ಸಿಂಗ್‌ ಅವರಂತಹ ನಾಯಕರೇ ಪರಾಭವಗೊಂಡಿದ್ದಾರೆ. ಹೀಗಾಗಿ ಅಲ್ಲಿ ‘ಏನೋ ಆಗಿದೆ’ ಎಂಬ ಅನುಮಾನದೊಂದಿಗೆ ಮತದಾನ ವಿಧಾನ ಕುರಿತು ಪರಿಣತರ ಮೂಲಕ ವಿಧಿವಿಜ್ಞಾನ ಪರೀಕ್ಷೆ ನಡೆಸಲು ಮುಂದಾಗಿದೆ.

ಪಿಟಿಐ ಸುದ್ದಿಸಂಸ್ಥೆಗೆ ನಿಯೋಜಿತ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಮಾತನಾಡಿ, ವಿಂಧ್ಯ ವಲಯದಲ್ಲಿನ ಇವಿಎಂಗಳ ಬಗ್ಗೆ ಈಗಲೂ ನಮಗೆ ಅನುಮಾನವಿದೆ. ಅಲ್ಲಿನ ಮತದಾನ ವಿಧಾನ ಕುರಿತು ವಿಧಿವಿಜ್ಞಾನ ಪರೀಕ್ಷೆ ನಡೆಸಿ, ವರದಿ ಬಂದ ಬಳಿಕ ಚುನಾವಣಾ ಆಯೋಗದ ಜತೆ ಮಾತನಾಡುತ್ತೇವೆ ಎಂದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಯ ರೀತಿಯಲ್ಲೇ ಈ ಪರೀಕ್ಷೆ ನಡೆಯಲಿದೆ. ವೃತ್ತಿಪರ ಸಂಸ್ಥೆಯೊಂದನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. 30 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ.40ರಷ್ಟುಮತದಾರರನ್ನು ಸಂಸ್ಥೆಯವರು ಸಂದರ್ಶಿಸಿ, ಜನರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಅರಿಯಲಿದ್ದಾರೆ. ಪರಿಣತರ ವರದಿ ಬಂದ ಬಳಿಕ ಕೋರ್ಟ್‌ಗೆ ಹೋಗುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಂಧ್ಯ ವಲಯದ ಸತ್ನಾ ಜಿಲ್ಲೆಯಲ್ಲಿ ಮತದಾನ ದಿನ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟಿದ್ದವು. ಮೂರು ತಾಸು ಮತದಾನ ಸ್ಥಗಿತಗೊಂಡಿತ್ತು. ಅದೂ ಅಲ್ಲದೆ ಇವತ್ತು ಬೆಳಗ್ಗೆ ಕೂಡ ಜನರು ಕರೆ ಮಾಡಿ ಕಾಂಗ್ರೆಸ್ಸಿಗೇ ಮತ ಹಾಕಿದ್ದರೂ, ಫಲಿತಾಂಶ ಬೇರೆ ಬಂದಿದೆ ಎನ್ನುತ್ತಿದ್ದಾರೆ ಎಂದು ತಿಳಿಸಿದ್ದಾರೆ.

click me!