
ಉಡುಪಿ (ನ.24): ಧರ್ಮ ಸಂಸದ್ ನಡೆಯುವ ರಾಯಲ್ ಮೈದಾನದಲ್ಲಿ ಕಳೆದೊಂದು ವಾರದಿಂದ ಸಾವಿರಕ್ಕೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ಪೆಂಡಾಲ್ ಹಾಕುವುದಕ್ಕೆ, ತೋರಣ ಕಟ್ಟುವುದಕ್ಕೆ, ಕಸ ಗುಡಿಸುವುದಕ್ಕೆ, ಧೂಳೆಳದಂತೆ ನೀರು ಚುಮುಕಿಸುವುದಕ್ಕೆ, ಊಟ ಬಡಿಸುವುದಕ್ಕೆ, ಅತಿಥಿಗಳನ್ನು ನೋಡಿಕೊಳ್ಳುವುದಕ್ಕೆ, ಗೇಟು ಕಾಯುವುದಕ್ಕೆ, ವಾಹನ ಪಾರ್ಕಿಂಗ್ ಮಾಡುವುದಕ್ಕೆ ಹೀಗೆ ಎಲ್ಲೆಲ್ಲಿಯೂ ಸ್ವಯಂ ಸೇವಕರು ಸ್ವಯಂ ಆಸಕ್ತಿಯಿಂದ ದುಡಿಯುತ್ತಿದ್ದಾರೆ.
ನೂರಾರು ಮಂದಿ ಮಹಿಳೆಯರು ಕೂಡ ಇಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಸಭಾಂಗಣದಲ್ಲಿ ಸುಂದರ ರಂಗೋಲಿಗಳಿಂದ ಅಂದವನ್ನು ಹೆಚ್ಚಿಸಿದ್ದಾರೆ. ವಿಶೇಷ ಎಂದರೆ, ಅವರಲ್ಲಿ ಬಹುತೇಕ ಮಂದಿ ಹೊರ ಜಿಲ್ಲೆಯವರು. ಬಳ್ಳಾರಿ, ರಾಯಚೂರು, ಮೈಸೂರು, ಶಿವಮೊಗ್ಗಗಳಿಂದಲೂ ನೂರಾರು ಮಂದಿ ಕಾರ್ಯಕರ್ತರು ಇಲ್ಲಿಗೆ ಬಂದಿದ್ದಾರೆ. ನಗರದಾದ್ಯಂತ ಕೇಸರಿ ಪತಾಕಿಗಳನ್ನು ಕಟ್ಟುವುದಕ್ಕೆ, ಬಾವುಟಗಳನ್ನು ನೆಡುವುದಕ್ಕೆ ಸಹಾಯ ಮಾಡಿದ್ದಾರೆ. ಅತಿಥಿಗಳನ್ನು - ಸಾಧು ಸಂತರನ್ನು ಅವರ ವಸತಿಗೆ ತಲುಪಿಸುವುದಕ್ಕೆ, ಅಲ್ಲಿ ಅವರಿಗೆ ಬೇಕಾದ ಸಹಾಯಗಳನ್ನು ಮಾಡುವುದಕ್ಕೂ ಈ ಸ್ವಯಂಸೇವಕರು ಸಹಾಯ ಮಾಡುತ್ತಿದ್ದಾರೆ.
ವಿಐಪಿಗಳ ರಕ್ಷಣೆಗೂ ಅವರು ಕಟಿಬದ್ಧರಾಗಿದ್ದಾರೆ, ನೂಕುನುಗ್ಗಲಾಗದಂತೆ, ಸರದಿಯನ್ನು ನೋಡಿಕೊಳ್ಳುವುದಕ್ಕೆ ಎಲ್ಲೆಲ್ಲೂ ಅವರಿದ್ದಾರೆ. ವಿಶೇಷ ಎಂದರೆ ಸಂಬಳ ಕೊಟ್ಟರೂ ಅಂತಹ ಸ್ವಯಂ ಸೇವಕರು ಸಿಕ್ಕಲಿಕ್ಕಿಲ್ಲ, ಅವರೆಲ್ಲರೂ ರಾತ್ರಿ ಹಗಲು ಉಚಿತವಾಗಿ ದುಡಿಯುತ್ತಿದ್ದಾರೆ. ನಾವು ಹಿಂದು ಧರ್ಮದ ಸೇವೆಗಾಗಿ ಬಂದಿದ್ದೇವೆ, ನಾವು ಇಲ್ಲಿಗೆ ಬರುವ ಸಾಧು ಸಂತರಿಗೆ ಅಳಿಲ ಸೇವೆ ಸಲ್ಲಿಸುತ್ತಿದ್ದೇವೆ ಎನ್ನುತ್ತಾರೆ ಮಂಗಳೂರಿನ ಮುತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.