ಕೆಪಿಸಿಸಿ ರೇಸ್‌ಗೆ ಪಾಟೀಲ್‌ ಬಂದಿದ್ದೇಗೆ?

By Suvarna Web DeskFirst Published Apr 18, 2017, 7:37 AM IST
Highlights

ರಾಹುಲ್‌ ಗಾಂಧಿ ಕ್ಯಾಂಪ್‌ನೊಂದಿಗೆ ತುಸು ಆಪ್ತ ಸಂಬಂಧ ಹೊಂದಿರುವ ಎಂ.ಬಿ. ಪಾಟೀಲ್‌ ಅವರು ರಾಹುಲ್‌ ಕ್ಯಾಂಪ್‌ನ ಕೆಲ ಪ್ರಭಾವಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೂ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ಹೈಕಮಾಂಡ್‌ ಎಂ.ಬಿ. ಪಾಟೀಲ್‌ಗೆ ಸೂಚಿಸಿತ್ತು.

ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸ್‌ಗೆ ಹಠಾತ್‌ ಆಗಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರ ಹೆಸರು ಸೇರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಕುತೂಹಲಕರ ಚರ್ಚೆ ನಡೆದಿದೆ.

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂ.ಬಿ.ಪಾಟೀಲ್‌ ಅವರ ಹೆಸರನ್ನು ಹೈಕಮಾಂಡ್‌ ಮುಂದೆ ಸೂಚಿಸಿದರು ಎಂದು ಹೇಳಲಾಗುತ್ತಿದೆ. ಆದರೆ, ಸಿಎಂ ಆಪ್ತರ ಪ್ರಕಾರ ಎಂ.ಬಿ. ಪಾಟೀಲ್‌ ಅವರ ಹೆಸರನ್ನು ಸೂಚಿಸಿದ್ದು ಸಿಎಂ ಅಲ್ಲ, ಬದಲಾಗಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌!

ದೆಹಲಿ ಭೇಟಿ ವೇಳೆ ಅಹ್ಮದ್‌ ಪಟೇಲ್‌ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿ ಅಧ್ಯಕ್ಷರ ಬದಲಾವಣೆಯ ಅಗತ್ಯವನ್ನು ಮನಗಾಣಿಸುವುದರ ಜೊತೆಗೆ ಈ ಹುದ್ದೆಯನ್ನು ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವವರಿಗೆ ವಹಿಸುವುದೇ ಸೂಕ್ತ ಎಂದು ವಾದ ಮಂಡಿಸಿ, ಈ ಅರ್ಹತೆ ಹೊಂದಿರುವ ಎಸ್‌.ಆರ್‌. ಪಾಟೀಲ್‌ ಅವರ ಹೆಸರನ್ನು ಹುದ್ದೆಗೆ ಸೂಚಿಸಿದರು ಎನ್ನಲಾಗಿದೆ. ಈ ಹಂತದಲ್ಲಿ ಅಹ್ಮದ್‌ ಪಟೇಲ್‌ ಅವರು, ಲಿಂಗಾಯತರಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ನೀಡಬೇಕು ಎಂದಾದರೆ ಎಸ್‌.ಆರ್‌.ಪಾಟೀಲ್‌ ಅವರಿಗಿಂತ ಸಂಘಟನೆ ಹಾಗೂ ಸಂಪನ್ಮೂಲ ಹೊಂದಿರುವ ಎಂ.ಬಿ. ಪಾಟೀಲ್‌ ಹೆಸರು ಪರಿಗಣಿಸಬಹುದಲ್ಲ ಎಂದು ಸೂಚಿಸಿದರು ಎನ್ನುತ್ತವೆ ಮೂಲಗಳು.

ಇದಕ್ಕೆ ಸಿಎಂ ಕೂಡ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂಬುದು ಇದೇ ಮೂಲಗಳ ಅಂಬೋಣ. ರಾಹುಲ್‌ ಗಾಂಧಿ ಕ್ಯಾಂಪ್‌ನೊಂದಿಗೆ ತುಸು ಆಪ್ತ ಸಂಬಂಧ ಹೊಂದಿರುವ ಎಂ.ಬಿ. ಪಾಟೀಲ್‌ ಅವರು ರಾಹುಲ್‌ ಕ್ಯಾಂಪ್‌ನ ಕೆಲ ಪ್ರಭಾವಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೂ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ಹೈಕಮಾಂಡ್‌ ಎಂ.ಬಿ. ಪಾಟೀಲ್‌ಗೆ ಸೂಚಿಸಿತ್ತು. ಇದನ್ನು ಸೋಮವಾರ ಮಾಧ್ಯಮಗಳ ಮುಂದೆ ಖುದ್ದು ಎಂ.ಬಿ.ಪಾಟೀಲ್‌ ಹೇಳಿಕೊಂಡಿದ್ದಾರೆ.

click me!