
ಸೋಲ್(ಏ.15): ವಿಶ್ವದ ಮೇಲೆ ಮೂರನೇ ಮಹಾಯುದ್ಧದ ಕಾರ್ಮೋಡ ಆವರಿಸಿರುವಾಗಲೇ, ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಸೃಷ್ಟಿಯಾಗಿರುವ ತ್ವೇಷಮಯ ಪರಿಸ್ಥಿತಿ ಶನಿವಾರ ಮಹತ್ವದ ಮಜಲು ತಲುಪುವ ಸಂಭವವಿದ್ದು, ಎರಡೂ ದೇಶಗಳ ನಡುವಣ ಯುದ್ಧಕ್ಕೆ ನಾಂದಿ ಹಾಡುವ ಎಲ್ಲ ಲಕ್ಷಣಗಳೂ ಇವೆ.
ವಿಶ್ವ ಸಮುದಾಯದ ಎಲ್ಲ ಎಚ್ಚರಿಕೆಗಳನ್ನು ಉಪೇಕ್ಷಿಸಿ ಒಂದಾದ ಮೇಲೊಂದರಂತೆ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾಕ್ಕೆ ಪಾಠ ಕಲಿಸಲು ಅಮೆರಿಕ ಸಿದ್ಧವಾಗಿರುವಾಗಲೇ, ಸರ್ವಾಧಿಕಾರಿ ಕಿಮ್ ಜಾಂಗ್- ಉನ್ ಸಡ್ಡು ಹೊಡೆಯಲು ಸಜ್ಜಾಗಿದ್ದಾರೆ. ಉತ್ತರ ಕೊರಿಯಾದ ಸಂಸ್ಥಾಪಕರೂ ಆಗಿರುವ ತಮ್ಮ ತಾತ ಕಿಮ್ ಇಲ್ ಸಂಗ್ ಅವರ 105ನೇ ಜನ್ಮದಿನಾಚರಣೆ (ಸೂರ್ಯನ ದಿನ) ನಿಮಿತ್ತ ಶನಿವಾರ ಮತ್ತೊಂದು ಅಣ್ವಸ್ತ್ರವನ್ನು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.
ಹಾಗೊಂದು ವೇಳೆ, ಉತ್ತರ ಕೊರಿಯಾ ಮತ್ತೊಂದು ಅಣ್ವಸ್ತ್ರವನ್ನು ಪರೀಕ್ಷೆಗೆ ಒಳಪಡಿಸಿದ್ದೇ ಆದಲ್ಲಿ, ಅದರ ಮೇಲೆ ಯುದ್ಧ ಆರಂಭಿಸಲು ಅಮೆರಿಕ ಸಿದ್ಧವಾಗಿದೆ ಎನ್ನಲಾಗಿದೆ. ನಿಜಕ್ಕೂ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸಿದೆಯೇ ಎಂಬುದು ದೃಢಪಟ್ಟನಂತರ ಈ ದಾಳಿ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಅಣ್ವಸ್ತ್ರ ಪರೀಕ್ಷೆ ಬಳಿಕ ಹೊರಬರುವ ವಿಕಿರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಅಮೆರಿಕ ತನ್ನ ‘ಅಣು ಶೋಧ' ನೌಕೆಯೊಂದನ್ನು ಜಪಾನ್‌ಗೆ ರವಾನಿಸಿದೆ ಎಂದು ಹೇಳಲಾಗಿದೆ. ಸಿರಿಯಾ, ಆಷ್ಘಾನಿಸ್ತಾನದ ಮೇಲಿನ ದಾಳಿಯ ಹುಮ್ಮಸ್ಸಿನಲ್ಲಿರುವ ಅಮೆರಿಕ ಯುದ್ಧೋತ್ಸಾಹದಲ್ಲಿರುವುದನ್ನು ಅರಿತಿರುವ ಉತ್ತರ ಕೊರಿಯಾ, ಯುದ್ಧ ಅವರಿಗೆ ಇಷ್ಟವಾದರೆ ನಾವೂ ಸಿದ್ಧ ಎಂದು ಸವಾಲು ಹಾಕಿದೆ.
ಈ ನಡುವೆ ಯಾರೇ ಆಗಲಿ ಪ್ರಚೋದನೆ ನೀಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಮಿತ್ರ ರಾಷ್ಟ್ರವಾಗಿರುವ ಚೀನಾ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಸಿರಿಯಾ ಮೇಲೆ ದಾಳಿ ನಡೆಸಿದ ಅಮೆರಿಕ ವಿರುದ್ಧ ಕ್ರುದ್ಧವಾಗಿರುವ ರಷ್ಯಾ ಕೂಡ, ತಾಳ್ಮೆ ವಹಿಸುವಂತೆ ಎರಡೂ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.