
ಗದಗ (ಜ.2): ಅದು ಹೇಳಿ ಕೇಳಿ ಬರದ ನಾಡು. ಎತ್ತ ಸಾಗಿದರೂ ಬಿಸಿಲಿನ ಬೇಗೆ. ಅಣತಿ ದೂರದಲ್ಲಿ ಕಪ್ಪತ್ತಗುಡ್ಡದ ತಪ್ಪಲು ಪ್ರದೇಶಕ್ಕೊದ್ದುಕೊಂಡಿರುವ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡಕೊಳ ಗ್ರಾಮದ ರೈತನೋರ್ವ ಜೀತ ಪದ್ಧತಿಗೆ ಸವಾಲೊಡ್ಡಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಇತರರಿಗೂ ಮಾದರಿ ಆಗಿದ್ದಾನೆ.
ಮಲ್ಲಪ್ಪ ಪೂಜಾರ ಎಂಬ ರೈತನೇ ಜೀತ ಪದ್ಧತಿಯ ಬೇಗೆಯಲ್ಲಿ ಬೆಂದು, ಕಡೆಗೊಮ್ಮೆ ಹೆಂಡತಿ ಬಸವ್ವ ನೀಡಿದ ಧೈರ್ಯ ಮತ್ತು ಬೆಂಬಲದಿಂದ ಇಂದು ತನ್ನದೇ ಸ್ವಂತ ಮನೆ ಮಾಡಿಕೊಂಡು, ಕೈ ತುಂಬಾ ಸಂಪಾದನೆ ಮಾಡಿಕೊಂಡು ನೆಮ್ಮದಿಯಾಗಿ ಇದ್ದಾನೆ.
ಮಲ್ಲಪ್ಪನ ಹಿಂದಿದೆ ರೋಚಕ ಕತೆ : ಬಡತನವನ್ನೇ ಹೊದ್ದು ಮಲಗಿದ್ದ ಮನೆಯಲ್ಲಿ ಹುಟ್ಟಿದ್ದ ಮಲ್ಲಪ್ಪನಿಗೆ ಇನ್ನೊಬ್ಬರ ಮನೆಯಲ್ಲಿ ಜೀತ ಮಾಡಿಕೊಂಡು ಬದುಕಿನ ಬಂಡಿ ತಳ್ಳುವುದು ಅನಿವಾರ್ಯವಾಗಿತ್ತು. ಇರುವ ತುಂಡು ಭೂಮಿಯಲ್ಲಿ ಏನಾದರೂ ಬೆಳೆಯೋಣ ಎಂದರೆ ಬರದ ನಡುವಲ್ಲಿ ಅದೂ ಕೂಡ ಮತ್ತೊಂದು ಹೊರೆಯೇ ಆಗುತ್ತದೆಯೇ ಹೊರತು, ಅದರಿಂದ ಲಾಭವಿಲ್ಲ ಎಂದುಕೊಂಡು ವೃತ್ತಿಯಲ್ಲಿಯೇ ಸಾಗಲು ನಿರ್ಧಾರ ಮಾಡಿದವರಂತೆ ಬದುಕು ನಡೆಸುತ್ತಿರುತ್ತಾನೆ. ಇದರಿಂದ ಹೊತ್ತಿನ ತುತ್ತಿಗೆ ಕುತ್ತು ಬರದೇ ಜೀವನ ಸಾಗುತ್ತಿತ್ತು. ಆದರೆ ಒಂದು ದಿನ ಮಾಲೀಕರು ನೀಡುತ್ತಿರುವ ಕೂಲಿ ಸಾಕಾಗುತ್ತಿಲ್ಲ.
ಇನ್ನು ಬದುಕು ಕಷ್ಟವಾಗುತ್ತದೆ ಎನ್ನಿಸಿದಾಗಲೇ ಹೆಂಡತಿ ಬಸಮ್ಮ ‘ಅವ್ರ ಅಷ್ಟೊಂದು ಕೆಲ್ಸ ಮಾಡಸ್ತಾರ. ಆದ್ರೂ ಕೂಲಿ ಜಾಸ್ತಿ ಕೊಡಂಗಿಲ್ಲ. ಅಲ್ಲಿಗ್ ಹೋಗುದು ಬ್ಯಾಡ್ ಬಿಡ್ರಿ. ನಾವ ಏನಾರ ಬ್ಯಾರೆ ಕೆಲ್ಸ ನೋಡ್ಕೊಳ್ಳುನ’ ಅಂತಾ ಹೇಳಿ ಧೈರ್ಯ ತುಂಬಿದ್ದೆ ಇಂದಿನ ಸ್ವಾಭಿಮಾನದ ಬದುಕಿಗೆ ಮುನ್ನುಡಿ.
ಬೇರೆ ಕೆಲಸ ಎಂದು ನಿರ್ಧಾರ ಮಾಡಿಕೊಂಡ ದಂಪತಿಗಳು ದೂರದ ಮಂಗಳೂರಿಗೆ ತೆರಳಿ ಗಾರೆ ಕೆಲಸ ಮಾಡಲು ಮುಂದಾಗುತ್ತಾರೆ. ಅಲ್ಲಿ ಒಂದಷ್ಟು ಹಣ ಮಾಡಿಕೊಂಡು ಮತ್ತೆ ಊರಿಗೆ ಬಂದು ಎರಡು ಆಡುಗಳನ್ನು ಖರೀದಿಸಿ ಯಶಸ್ಸಿನ ದಾರಿ ತುಳಿಯುತ್ತಾರೆ. ಕೆಲ ದಿನಗಳಲ್ಲಿ ಆಡಿನ ಸಂತತಿ ದ್ವಿಗುಣಗೊಂಡು ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತದೆ. ನಂತರದಲ್ಲಿ ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ... ಹೀಗೆ ಆಡುಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. ಅದೇ ರೀತಿ ಆದಾಯವೂ ಕೂಡ.
ಮೊದಲು ಮಾಡಿಕೊಂಡಿದ್ದ ಎಲ್ಲ ಸಾಲಗಳನ್ನು ತೀರಿಸಿ ಸುಮಾರು ಹತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಹೊಸಮನೆಯನ್ನೂ ಮಾಡಿಕೊಂಡಿದ್ದೇವೆ. ಈಗ ಒಂದು ಆಡಿನ ಬೆಲೆ ಕನಿಷ್ಟ ನಾಲ್ಕರಿಂದ ಐದು ಸಾವಿರ ರುಪಾಯಿ ಇದೆ. ನಮ್ಮ ಹತ್ತಿರ ಮೂವತ್ತಕ್ಕು ಹೆಚ್ಚು ಆಡುಗಳಿವೆ. ಆರು ತಿಂಗಳಿಗೆ ಎರಡು ಮರಿಗಳೆಂದರೂ ಒಂದು ವರ್ಷದಲ್ಲಿ ಇನ್ನು ಮೂವತ್ತು ಆಡುಗಳಾಗುತ್ತವೆ. ಅಷ್ಟೊತ್ತಿಗೆ ಸುಮಾರು ಲಕ್ಷ ರುಪಾಯಿ ವರೆಗೆ ಲಾಭ ಬಂದುಬಿಡುತ್ತದೆ. ನಾನು ಏನೂ ಓದು, ಬರಹ ತಿಳಿಯದವನು, ಇನ್ನೊಬ್ಬರ ಮನೆಯಲ್ಲಿ ಜೀತ ಮಾಡಿಕೊಂಡಿದ್ದವನು ಹೆಂಡತಿ ಮಾತು ಕೇಳಿ ಇಂದು ನೆಮ್ಮದಿಯಾಗಿ ಇದ್ದೆನೆ. ಆಡು ಸಾಕಾಣಿಕೆಯಿಂದಲೇ ನಾನು ಇಂದು ಸ್ವಂತ ಸೂರಿನಲ್ಲಿ ಇರುವುದು ಸಾಧ್ಯವಾಗಿದೆ ಎನ್ನುವ ಮಲ್ಲಪ್ಪ ಅವರೊಂದಿಗೆ ನೀವೂ ಮಾತನಾಡಿ. ದೂ. 8197480408
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.