ಕಾರ್, ಬೈಕ್ ಗೆ ಇನ್ನು ಈ ನಿಯಮ ಕಡ್ಡಾಯ

By Web DeskFirst Published Aug 31, 2018, 12:13 PM IST
Highlights

ಕಾರು ಮತ್ತು ದ್ವಿಚಕ್ರ ವಾಹನಗಳ ಖರೀದಿದಾರರಿಗೆ ಕಡ್ಡಾಯ ನಿಯಮವೊಂದು ನಾಳೆಯಿಂದಲೇ ಜಾರಿಗೆ ಬರಲಿದೆ.  ಕಾರು ಮತ್ತು ದ್ವಿಚಕ್ರ ವಾಹನಗಳ ಖರೀದಿದಾರರಿಗೆ 3ನೇ ವ್ಯಕ್ತಿಗೆ ವಿಮೆ (ಥರ್ಡ್‌ ಪಾರ್ಟಿ ಇನ್ಷೂರನ್ಸ್‌) ಸೌಲಭ್ಯ ನೀಡಬೇಕೆಂಬ ಕಡ್ಡಾಯ ನಿಯಮ ಸೆ.1ರಿಂದಲೇ ಜಾರಿಗೆ ಬರಲಿದೆ. 

ನವದೆಹಲಿ: ಕಾರು ಮತ್ತು ದ್ವಿಚಕ್ರ ವಾಹನಗಳ ಖರೀದಿದಾರರಿಗೆ 3ನೇ ವ್ಯಕ್ತಿಗೆ ವಿಮೆ (ಥರ್ಡ್‌ ಪಾರ್ಟಿ ಇನ್ಷೂರನ್ಸ್‌) ಸೌಲಭ್ಯ ನೀಡಬೇಕೆಂಬ ಕಡ್ಡಾಯ ನಿಯಮ ಸೆ.1ರಿಂದಲೇ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದಲೇ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಬೆಲೆ ದುಬಾರಿಯಾಗಲಿವೆ.

ಇದರ ಪ್ರಕಾರ 1000 ಸಿಸಿಗಿಂತ ಕಡಿಮೆ ಇಂಜಿನ್‌ ಹೊಂದಿರುವ ಕಾರುಗಳ ಖರೀದಿಗೆ ಮೂರನೇ ವ್ಯಕ್ತಿಯ 3 ವರ್ಷಗಳ ವಿಮಾ ಸೌಲಭ್ಯಕ್ಕೆ 5286 ರು. ತಗುಲಲಿದೆ. 1000-1500 ಸಿಸಿ ಇಂಜಿನ್‌ ಸಾಮರ್ಥ್ಯದ ವಾಹನಗಳಿಗೆ 9534 ರು., 1500ಕ್ಕಿಂತ ಹೆಚ್ಚುವರಿ ಇಂಜಿನ್‌ ಸಾಮರ್ಥ್ಯದ ವಾಹನಗಳಿಗೆ 24,305 ರು. ಆಗಲಿದೆ.

ಇದೇ ರೀತಿ 75 ಸಿಸಿ ಇಂಜಿನ್‌ ಸಾಮರ್ಥ್ಯ ದ್ವಿಚಕ್ರ ವಾಹನಗಳ 3ನೇ ವ್ಯಕ್ತಿಯ 5 ವರ್ಷಗಳ ವಿಮೆಗಾಗಿ 1045 ರು., 75-150 ಸಿಸಿಯ ಬೈಕ್‌ಗಳ ಖರೀದಿಗೆ ಹೆಚ್ಚುವರಿ 3285, 150-350 ಸಿಸಿ ಇಂಜಿನ್‌ ಸಾಮರ್ಥ್ಯದ ಬೈಕ್‌ಗೆ 5453 ರು. ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ 13,034 ರು. ಪಾವತಿಸಬೇಕಿದೆ.

ನೂತನವಾಗಿ ಖರೀದಿಸಲಾಗುವ ಕಾರುಗಳಿಗೆ 3 ವರ್ಷದ 3ನೇ ವ್ಯಕ್ತಿಯ ವಿಮೆ ಹಾಗೂ ಬೈಕ್‌ಗಳ ಖರೀದಿಗೆ 5 ವರ್ಷದ 3ನೇ ವ್ಯಕ್ತಿಯ ವಿಮೆ ಸೌಲಭ್ಯವನ್ನು ವಿಮಾ ಕಂಪನಿಗಳು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

click me!