ಪದೇ ಪದೇ ಚುನಾವಣೆಗಳು ಬೇಡ - ಕಾನೂನು ಆಯೋಗದ ಕರಡು ವರದಿ

By Web DeskFirst Published Aug 31, 2018, 12:09 PM IST
Highlights

ಒಮ್ಮೆ ಲೋಕಸಭಾ ಚುನಾವಣೆ, ಮತ್ತೊಮ್ಮೆ ವಿಧಾನಸಭಾ ಚುನಾವಣೆ. ಖರ್ಚು ಹೆಚ್ಚು, ಸಮಯವೂ ನಷ್ಟ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡ ಕೇಂದ್ರ ಸರಕಾರ ಒಂದು ರಾಷ್ಟ್ರ, ಒಂದು ಚುನಾವಣೆ ನಡೆಸಲು ಮುಂದಾಗಿದ್ದು, ಈ ಬಗ್ಗೆ ಇದೀಗ ಚುನಾವಣಾ ಆಯೋಗವೂ ಕರಡು ಸಲ್ಲಿಸಿದೆ.

ನವದೆಹಲಿ: ‘ದೇಶದಲ್ಲಿ ಏಕಕಾಲಕ್ಕೆ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ನಡೆಸಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಸಾರವಾಗಿ, ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಗುರುವಾರ ಕರಡು ವರದಿ ಸಲ್ಲಿಸಿದೆ. ‘ಪದೇ ಪದೇ ದೇಶವನ್ನು ಚುನಾವಣಾ ಗುಂಗಿನಲ್ಲಿ ಇಡುವುದನ್ನು ತಪ್ಪಿಸಲು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸುವುದೇ ಪರಿಹಾರ’ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

160 ಪುಟಗಳನ್ನು ಹೊಂದಿರುವ ಈ ಕರಡು ವರದಿಯಲ್ಲಿ, ‘ಸಂವಿಧಾನ ಹಾಗೂ ಚುನಾವಣಾ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ, ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕು’ ಎಂದು ಶಿಫಾರಸು ಮಾಡಿದೆ. ಆದರೆ ವಿಶೇಷ ಸ್ಥಾನಮಾನವನ್ನು ಹೊಂದಿರುವ ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ರಾಜ್ಯಗಳ ಚುನಾವಣೆಯನ್ನು ಲೋಕಸಭೆ ಚುನಾವಣೆಯೊಂದಿಗೆ ನಡೆಸಬಹುದು ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ.

ಏಕಕಾಲಕ್ಕೆ ನಡೆಯುವ ಚುನಾವಣೆಗಳಿಂದ ಸಾರ್ವಜನಿಕರ ಹಣ ಉಳಿತಾಯವಾಗುತ್ತದೆ. ಆಡಳಿತಾತ್ಮಕ ಯಂತ್ರವು ಚುನಾವಣೆಗಳ ಕಡೆ ಗಮನ ಹರಿಸುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನ ಕೊಡುವುದು ಸಾಧ್ಯವಾಗಲಿದೆ. ಸರ್ಕಾರದ ಯೋಜನೆಗಳ ಸಮರ್ಪಕ ಜಾರಿ ಸಾಧ್ಯವಾಗಲಿದೆ ಎಂದು ಅದು ತಿಳಿಸಿದೆ.

ಆದರೆ, ಈಗಿರುವ ಸಂವಿಧಾನದ ಚೌಕಟ್ಟಿನ ಅಡಿ ಏಕಕಾಲದ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದೂ ಅದು ಎಚ್ಚರಿಕೆ ನೀಡಿದೆ. ಇದು ಕರಡು ವರದಿಯಾಗಿದ್ದು, ಅಂತಿಮ ವರದಿಯನ್ನು ಆಯೋಗ ನಂತರದ ದಿನಗಳಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.

click me!