ವಾಹನ ಸವಾರರೆ ಎಚ್ಚರ : ವಿಮೆ ಇಲ್ಲದಿದ್ದರೆ ವಾಹನವೇ ಜಪ್ತಿ

By Suvarna Web DeskFirst Published Jan 24, 2018, 10:02 AM IST
Highlights

ವಾಹನ ಸವಾರರೇ ಎಚ್ಚರ! ನಿಮ್ಮ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಕಡ್ಡಾಯ. ಇಲ್ಲದಿದ್ದರೆ ತಪಾಸಣೆ ವೇಳೆ ಸಂಚಾರ ಪೊಲೀಸರು ಅಥವಾ ಸಾರಿಗೆ ಇಲಾಖೆ ವಿಶೇಷ ತನಿಖಾ ತಂಡಗಳು ವಾಹನ ಜಪ್ತಿ ಮಾಡಲಿವೆ.

ಬೆಂಗಳೂರು: ವಾಹನ ಸವಾರರೇ ಎಚ್ಚರ! ನಿಮ್ಮ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಕಡ್ಡಾಯ. ಇಲ್ಲದಿದ್ದರೆ ತಪಾಸಣೆ ವೇಳೆ ಸಂಚಾರ ಪೊಲೀಸರು ಅಥವಾ ಸಾರಿಗೆ ಇಲಾಖೆ ವಿಶೇಷ ತನಿಖಾ ತಂಡಗಳು ವಾಹನ ಜಪ್ತಿ ಮಾಡಲಿವೆ.

ಸುಪ್ರೀಂಕೋರ್ಟ್ ರಚಿಸಿರುವ ರಸ್ತೆ ಸುರಕ್ಷತಾ ಸಮಿತಿಯ ಶಿಫಾರಸಿನ ಮೇರೆಗೆ ಸಾರಿಗೆ ಇಲಾಖೆಯು ರಾಜ್ಯದಲ್ಲಿ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದಕ್ಕೆ ಮುಂದಾಗಿದೆ. ರಾಜ್ಯದಲ್ಲಿರುವ ಪ್ರತಿ ವಾಹನಗಳಿಗೂ ಥರ್ಡ್ ಪಾರ್ಟಿ ವಿಮೆ ಇರಲೇಬೇಕು.

ಒಂದು ವೇಳೆ ಇಲ್ಲದಿದ್ದರೆ ತಪಾಸಣೆ ವೇಳೆ ವಾಹನ ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಸಮಿತಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ಅವರು, ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಗಾಯಗೊಂಡರೆ ಅಥವಾ ಮೃತಪಟ್ಟರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಬರುವುದಿಲ್ಲ. ಥರ್ಡ್ ಪಾರ್ಟಿ ವಿಮೆ ಇದ್ದಾಗ ಪರಿಹಾರ ಸಿಗುತ್ತದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪರಿಣಾಮಕಾರಿ ಜಾರಿಗೆ ಸೂಚನೆ: ಥರ್ಡ್ ಪಾರ್ಟಿ ವಿಮೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಿತಿಯು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ವಾಹನ ತಪಾಸಣೆ ವೇಳೆ ವಿಮೆ ಪ್ರತಿ ಮನೆಯಲ್ಲಿದೆ, ಮರೆತು ಬಂದಿದ್ದೇನೆ ಎಂಬ ಸಮಜಾಯಿಷಿ ಮಾನ್ಯ ಮಾಡುವುದಿಲ್ಲ. ಸ್ಥಳದಲ್ಲೇ ವಾಹನ ಜಪ್ತಿ ಮಾಡಲಾಗುವುದು. ಚಾಲಕ ಅಥವಾ ಮಾಲೀಕ ವಿಮೆ ಪ್ರತಿ ತಂದು ತೋರಿಸಿದ ಬಳಿಕವಷ್ಟೇ ವಾಹನ ಬಿಡುಗಡೆಗೊಳಿಸುವುದಾಗಿ ಆಯುಕ್ತ ಬಿ.ದಯಾನಂದ ತಿಳಿಸಿದರು.

click me!