
ಮಾಂಸದ ವ್ಯಾಪಾರಿಯಿಂದ ಶುರುವಾದ ಘರ್ಷಣೆ
ಸಿಬಿಐನಲ್ಲಿ ಅಧಿಕಾರಿಗಳ ಘರ್ಷಣೆ ಶುರುವಾಗಲು ಮೂಲ ಕಾರಣ ಮೊಯಿನ್ ಅಖ್ತರ್ ಖುರೇಶಿ ಎಂಬ ಮಾಂಸ ವ್ಯಾಪಾರಿ. ಈತ ನಮ್ಮ ದೇಶದ ಅತಿದೊಡ್ಡ ಮಾಂಸ ರಫ್ತುದಾರರಲ್ಲಿ ಒಬ್ಬ 25 ಕಂಪನಿಗಳ ಮಾಲಿಕ. ಈತನ ಮೇಲೆ ದುಬೈ ಮತ್ತು ಯುರೋಪಿಯನ್ ದೇಶಗಳಿಗೆ 2000 ಕೋಟಿ ರು.ಗಳಿಗೂ ಅಧಿಕ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪವಿದೆ. ಸಿಬಿಐ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಿಂದ ಖುರೇಶಿಯನ್ನು ಕೈಬಿಡಲು ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ 2 ಕೋಟಿ ರು. ಲಂಚ ಪಡೆದಿದ್ದಾರೆ ಎಂದು ಸಿಬಿಐ ವಿಶೇಷ ನಿರ್ದೇಶಕ ಅಸ್ಥಾನಾ ಆರೋಪಿಸಿದ್ದರು.
ಬೇರೊಂದು ಪ್ರಕರಣದ ವಿಚಾರಣೆ ವೇಳೆ ಹೈದರಾಬಾದ್ ಉದ್ಯಮಿ ಸತೀಶ್ ಸನಾ ಎಂಬಾತ ವರ್ಮಾ ಮತ್ತು ಖುರೇಶಿ ನಡುವಿನ ಲಂಚದ ವಿಷಯವನ್ನು ತನಗೆ ತಿಳಿಸಿದ್ದಾನೆ. ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಎಂಬಾತನ ಮೂಲಕ 2 ಕೋಟಿಯನ್ನು ವರ್ಮಾ ಅವರಿಗೆ ತಲುಪಿಸಲಾಗಿದೆ ಎಂದು ಸತೀಶ್ ಸನಾ ಹೇಳಿದ್ದಾನೆ ಎಂದು ಅಸ್ಥಾನಾ ಹೇಳಿದ್ದರು. ನಂತರ ಸೆಪ್ಟೆಂಬರ್ 26ರಂದು ಸಿಬಿಐ ಡಿವೈಎಸ್‌ಪಿ ದೇವೇಂದ್ರ ಕುಮಾರ್ ಈ ಕುರಿತು ವರದಿ ಸಿದ್ಧಪಡಿಸಿದ್ದರು. ಈ ಮಧ್ಯೆ ಕೇಂದ್ರ ಸಂಪುಟ ಕಾರ್ಯದರ್ಶಿಗೆ ಅಸ್ಥಾನಾ ಪತ್ರವನ್ನೂ ಬರೆದಿದ್ದರು. ಇವೆಲ್ಲದರ ನಡುವೆ ಮನೋಜ್ ಪ್ರಸಾದ್‌ರನ್ನು ಅ.16ರಂದು ಸಿಬಿಐ ಬಂಧಿಸಿತ್ತು.
2 ಕೋಟಿ ಲಂಚದ ಆರೋಪಕ್ಕೆ 3 ಕೋಟಿ ಲಂಚದ ಕೇಸು!
ನಂತರ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ, ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ 2 ಕೋಟಿ ರು. ಲಂಚ ಪಡೆದಿದ್ದಾರೆಂದು ಆರೋಪಿಸಿದ್ದ ಅಸ್ಥಾನಾ ಅವರೇ ಈ ಪ್ರಕರಣದಲ್ಲಿ 3 ಕೋಟಿ ರು. ಲಂಚ ಪಡೆದಿದ್ದಾರೆಂದು ಆರೋಪ ಹೊರಿಸಿ ಸಿಬಿಐನಲ್ಲಿ ಎಫ್‌ಐಆರ್ ದಾಖಲಾಯಿತು. ಅದರಲ್ಲಿ ಡಿವೈಎಸ್‌ಪಿ ದೇವೇಂದ್ರ ಕುಮಾರ್, ಮಧ್ಯವರ್ತಿ ಮನೋಜ್ ಪ್ರಸಾದ್ ಹೆಸರೂ ಇತ್ತು. ಆ ಎಫ್‌ಐಆರ್‌ನಲ್ಲಿ ಪದೇ ಪದೇ ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಲು ಮತ್ತು ಕ್ಲೀನ್‌ಚಿಟ್ ಪಡೆದುಕೊಳ್ಳಲು ಅಸ್ಥಾನಾ ಅವರಿಗೆ 3 ಕೋಟಿ ರು. ಲಂಚ ನೀಡಿದ್ದೇನೆಂದು ಸ್ವತಃ ಸತೀಶ್ ಸನಾ ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ. ಅಸ್ಥಾನಾ ವಿರುದ್ಧದ ಆರೋಪಕ್ಕೆ ಟೆಲಿಫೋನ್ ದಾಖಲೆಗಳಿವೆ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಸದ್ಯದ ಪ್ರಕರಣ ಏನು?
ಅಲೋಕ್ ವರ್ಮಾ ಅವರು ಮಾಂಸದ ವ್ಯಾಪಾರಿಯಿಂದ ಲಂಚ ಪಡೆದಿದ್ದಾರೆಂಬ ಆರೋಪವನ್ನು ಸಾಬೀತುಪಡಿಸಲು ಅಸ್ಥಾನಾ ಕಡೆಯ ಅಧಿಕಾರಿಗಳು ದಾಖಲೆಗಳನ್ನು ತಿದ್ದಿದ್ದಾರೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಹೀಗಾಗಿ ಸಿಬಿಐ ಮುಖ್ಯಸ್ಥ ವರ್ಮಾ ವಿರುದ್ಧ ತಿರುಗಿ ಬಿದ್ದಿದ್ದ ವಿಶೇಷ ನಿರ್ದೇಶಕ ಅಸ್ಥಾನಾ ವಿರುದ್ಧ ದೂರು ದಾಖಲಿಸಲಾಗಿತ್ತು. ಮಾಂಸ ರಫ್ತುದಾರ ಖುರೇಶಿ ತಮ್ಮ ಹೆಸರು ಕೈಬಿಡುವಂತೆ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾಗೆ ಮಧ್ಯವರ್ತಿಗಳ ಮೂಲಕ 2 ಕೋಟಿ ಲಂಚ ನೀಡಿದ್ದಾನೆಂದು ಮಧ್ಯವರ್ತಿ ಸತೀಶ್ ಸನಾ ಸೆ.26ರಂದು ಹೇಳಿದ್ದಾನೆಂದು ಡಿವೈಎಸ್‌ಪಿ ದೇವೇಂದ್ರ ಕುಮಾರ್ ವರದಿ ಸಿದ್ಧಮಾಡಿದ್ದರು. ಆದರೆ ಸೆ.26ರಂದು ಸನಾ ಸಿಬಿಐ ಕಚೇರಿಗೇ ಬಂದಿರಲಿಲ್ಲ, ಹೈದರಾಬಾದ್‌ನಲ್ಲಿದ್ದರು ಎಂದು ಸಿಬಿಐ ತನಿಖೆ ವೇಳೆ ಬಯಲಾಗಿದೆ. ಹಾಗಾಗಿ ಅಲೋಕ್ ವರ್ಮಾ ಮೇಲಿನ ಆರೋಪ ಸಾಬೀತಿಗೆ ಫೋರ್ಜರಿ ಮಾಡಿದ್ದಾರೆಂಬ ಆರೋಪದ ಮೇಲೆ ದೇವೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿದೆ.
ಬಾಸ್ ನಂ.1, ಬಾಸ್ ನಂ.2 ಘರ್ಷಣೆಗೆ ನಿಜವಾದ ಕಾರಣವೇನು?
ಸಿಬಿಐನ ಇಬ್ಬರು ಬಾಸ್‌ಗಳ ಸಂಬಂಧದಲ್ಲಿ ಬಿರುಕು ಮೂಡಿದ್ದು 1 ವರ್ಷದ ಹಿಂದೆಯೇ. ಅಕ್ಟೋಬರ್ 2017ರಲ್ಲಿ ಅಸ್ಥಾನಾ ವಿಶೇಷ ನಿರ್ದೇಶಕರಾಗಿ ಆಯ್ಕೆಯಾಗುವುದನ್ನು ಅಲೋಕ್ ವರ್ಮಾ ವಿರೋಧಿಸಿದ್ದರು. ಅವರ ಮೇಲೆ ಹಗರಣದ ಆರೋಪವಿದೆ ಎಂದು ವರ್ಮಾ ಆಕ್ಷೇಪಿಸಿದ್ದರು. ಆದರೆ ಸುಪ್ರೀಂಕೋರ್ಟ್, ಸಿವಿಸಿ (ಕೇಂದ್ರೀಯ ಜಾಗ್ರತ ದಳ) ಹಾಗೂ ಸರ್ಕಾರ ಆ ಆರೋಪವನ್ನು ತಳ್ಳಿಹಾಕಿ ವಿಶೇಷ ನಿರ್ದೇಶಕರನ್ನಾಗಿ ಅಸ್ಥಾನಾ ಅವರನ್ನು ನೇಮಿಸಿದ್ದವು. ಅಲ್ಲಿಂದ ಇಬ್ಬರ ನಡುವೆ ಶೀತಲ ಸಮರ ಆರಂಭವಾಗಿತ್ತು. ಇತ್ತೀಚೆಗೆ ವರ್ಮಾ ಅವರು ಅಸ್ಥಾನಾ ನಿರ್ವಹಿಸುತ್ತಿದ್ದ ಪ್ರಮುಖ ಪ್ರಕರಣಗಳನ್ನು ಹಿಂಪಡೆದು ಶರ್ಮಾ ಎಂಬ ಇನ್ನೊಬ್ಬ ಅಧಿಕಾರಿಗೆ ವರ್ಗಾಯಿಸಿದ್ದರು. ಆ ಪೈಕಿ ಪಿ.ಚಿದಂಬರಂ ವಿರುದ್ಧದ ಪ್ರಕರಣವೂ ಇತ್ತು. ಅದಲ್ಲದೆ ಅಸ್ಥಾನಾ ಕಚೇರಿಯ ಅಧಿಕಾರಿಗಳನ್ನೂ ವರ್ಗಾಯಿಸಲಾಗಿತ್ತು. ಈ ಬಗ್ಗೆ ಅಸ್ಥಾನ ಕ್ಯಾಬಿನೆಟ್ ಸೆಕ್ರೆಟರಿಗೆ ಪತ್ರ ಬರೆದು, ‘ಅಲೋಕ್ ವರ್ಮಾ ಮತ್ತು ರಾಜೇಶ್ವರ್ ಸಿಂಗ್ (ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ) ಮತ್ತಿತರರು ತಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಏಕೆ ಇದು ಕೇಂದ್ರ ಸರ್ಕಾರಕ್ಕೆ ತಲೆನೋವು?
ಕೇಂದ್ರೀಯ ತನಿಖಾ ದಳ ಎಂಬುದು ಅತ್ಯುನ್ನತ ತನಿಖಾ ಸಂಸ್ಥೆ. ಈಗಾಗಲೇ ಸಿಬಿಐಗೆ ‘ಪಂಜರದ ಗಿಳಿ’ ಎಂಬ ಹಣೆಪಟ್ಟಿಬಂದಿಗೆ. ಈ ನಡುವೆ ಭ್ರಷ್ಟಾಚಾರದ ಆರೋಪ, ಆಂತರಿಕ ಕಿತ್ತಾಟಗಳು ನಡೆದರೆ ಸಿಬಿಐ ಜನರ ನಂಬಿಕೆ ಕಳೆದುಕೊಳ್ಳುತ್ತದೆ. ಇದೇ ವಿಷಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಿಪಕ್ಷಗಳು ದಾಳಿ ನಡೆಸುತ್ತವೆ. ಹೀಗಾಗಿ ಇದನ್ನು ಶೀಘ್ರವಾಗಿ ಬಗೆಹರಿಸಬೇಕಾದ ತುರ್ತು ಕೇಂದ್ರ ಸರ್ಕಾರಕ್ಕಿದೆ. ಆದ್ದರಿಂದ ಸ್ವತಃ ಪ್ರಧಾನಿ ಮೋದಿ ಅವರು ಈ ಪ್ರಕರಣದಲ್ಲಿ ಪ್ರವೇಶ ಮಾಡಿದ್ದಾರೆ.
ಅಲೋಕ್ ವರ್ಮಾ : 1979ನೇ ಬ್ಯಾಚ್‌ನ ಯುಪಿ ಕೇಡರ್ ಅಧಿಕಾರಿ. 1 ಫೆಬ್ರವರಿ 2017ರಿಂದ ಸಿಬಿಐ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲು ದೆಹಲಿ ಪೊಲೀಸ್ ಕಮಿಷನರ್ ಆಗಿದ್ದರು.
ಆರೋಪ ಏನು? ಮಾಂಸದ ವ್ಯಾಪಾರಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದ ರಕ್ಷಿಸಲು 2 ಕೋಟಿ ರು. ಲಂಚ ಪಡೆದ ಆರೋಪ. ಈ ಆರೋಪ ಹೊರಿಸಿದ್ದು ರಾಕೇಶ್ ಅಸ್ಥಾನಾ.
ರಾಕೇಶ್ ಅಸ್ಥಾನಾ : ಗುಜರಾತಿನ 1984ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಸದ್ಯ ಸಿಬಿಐ ವಿಶೇಷ ನಿರ್ದೇಶಕ. ಗೋಧ್ರಾ ಹತ್ಯೆ ಮತ್ತು ಮೇವು ಹಗರಣದಲ್ಲಿ ತನಿಖಾಧಿಕಾರಿಯಾಗಿದ್ದರು.
ಆರೋಪ ಏನು? ಮಾಂಸದ ವ್ಯಾಪಾರಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದ ರಕ್ಷಿಸಲು 3 ಕೋಟಿ ರು. ಲಂಚ ಪಡೆದ ಆರೋಪ. ಈ ಆರೋಪ ಹೊರಿಸಿದ್ದು ಸಿಬಿಐ ತನಿಖಾಧಿಕಾರಿಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.