
ಬೆಂಗಳೂರು(ಜ.12): ಮುಂದಿನ ವಿಧಾನಸಭಾ ಚುನಾವಣಾ ಚುನಾವಣೆಯ ಹೊತ್ತಿಗೆ ಅಧಿಕಾರದ ಕನಸು ಕಾಣುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಸದ್ಯ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ದಿಕ್ಕುಗೆಡಿಸಿದೆ. ಮೇಲ್ನೋಟಕ್ಕೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಫೈಟ್ ಎಂಬಂತೆ ಕಾಣುತ್ತಿದ್ದರೂ ಬಣ ರಾಜಕಾರಣ ಭರ್ಜರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿಯೇ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ತಡೆಯುವವರಾರು ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಬಿಜೆಪಿಯಲ್ಲಿ ಈಶ್ವರಪ್ಪ V/S ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷರ ವಿರೋಧದ ಮಧ್ಯೆಯೂ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮುಂದುವರಿಸುತ್ತಲೇ ಇದ್ದಾರೆ.. ಸಾಲದ್ದಕ್ಕೆ ನಿನ್ನೆ ಬೆಂಗಳೂರಿನಲ್ಲೇ ರಾಯಣ್ಣ ಬ್ರಿಗೇಡ್ ಸಭೆ ನಡೆಸಿದ ಈಶ್ವರಪ್ಪ ತಮ್ಮ ನಿಲುವನ್ನು ಸ್ಪಷ್ಟವಾಗಿ ಪಕ್ಷಕ್ಕೆ ತಲುಪಿಸಿದ್ದಾರೆ.
ನೇರಾನೇರವಾಗಿ ಚಾಟಿ ಬೀಸುವ ಈಶ್ವರಪ್ಪ. ತಮ್ಮ ರಾಜ್ಯಾಧ್ಯಕ್ಷರ ವಿರುದ್ಧ ತೊಡೆ ತಟ್ಟಲು ಸಾಧ್ಯವೆ? ಸಾಧ್ಯವಿಲ್ಲ. ಯಡಿಯೂರಪ್ಪ ನಾಯಕತ್ವವನ್ನು ವಿರೋಧಿಸುವ ಒಂದು ಬಣವೇ ಬಿಜೆಪಿಯಲ್ಲಿದೆ. ಆ ಬಣ ಸದ್ದಿಲ್ಲದೇ ಈಶ್ವರಪ್ಪನವರ ಬೆಂಬಲಕ್ಕೆ ನಿಂತಿದೆ ಎನ್ನಲಾಗ್ತಿದೆ.
ಈಶ್ವರಪ್ಪಗೆ ಇರುವ ಬಲವೇನು?
ಈಶ್ವರಪ್ಪ ಬಿಜೆಪಿಯ ನಿಷ್ಠಾವಂತ ಹಿರಿಯ ಮುಖಂಡ. ಎಂದಿಗೂ ಬಿಜೆಪಿ ಬಿಟ್ಟು ಬೇರೆ ಪಕ್ಷದತ್ತ ಕಣ್ಣೆತ್ತಿಯೂ ನೋಡಿಲ್ಲ. ಇದಲ್ಲದೇ ಯಡಿಯೂರಪ್ಪರ ನಾಯಕತ್ವ ವಿರೋಧಿಸುವ ಬಣದ ಬೆಂಬಲವಿದೆ. ಜೊತೆಗೆ ರಾಯಣ್ಣ ಬ್ರಿಗೇಡ್ ಸಂಘಟನೆಯಿಂದಾಗಿ ಹಿಂದುಳಿದ ಮತ್ತು ದಲಿತ ವರ್ಗದವರ ಸರ್ಪೊರ್ಟ್ ಕೂಡ ಈಶ್ವರಪ್ಪ ಅವರಿಗಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಆಗಲಿ, ಯಡಿಯೂರಪ್ಪ ಆಗಲಿ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳೋಕೆ ಸಾಧ್ಯವಾಗುಯತ್ತಿಲ್ಲ. ಅಷ್ಟೇ ಅಲ್ಲ ಯಡಿಯೂರಪ್ಪ ಕ್ರಮ ಕೈಗೊಳ್ಳದಿರಲು ಇನ್ನೂ ಕೆಲ ಕಾರಣಗಳಿವೆ.
ಯಡಿಯೂರಪ್ಪ ಸುಮ್ಮನಿದ್ದಿದ್ಯಾಕೆ?
ಯಡಿಯೂರಪ್ಪ ಒಂದು ಪಕ್ಷ ಬಿಟ್ಟು ಹೋಗಿ ವಾಪಸ್ ಬಂದವರು. ಜೊತೆಗೆ ಜೈಲಿಗೆ ಕೂಡ ಹೋಗಿ ಬಂದಿದ್ದಾರೆ ಬಿಎಸ್ವೈ. ಹೀಗಾಗಿ ಇಂಥ ಕಳಂಕಗಳಿಲ್ಲದ ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಖಡಕ್ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಇನ್ನೂ ಏನೋ ಧೈರ್ಯಮಾಡಿ ರಾಯಣ್ಣ ಬ್ರಿಗೇಡ್ ಹಿಂದೆ ಬಿದ್ದ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಂಡರೆ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಂಡರೆ ಹಿಂದುಳಿದ ಹಾಗೂ ದಲಿತ ವರ್ಗಗಳ ಮುನಿಸಿಗೂ ಕಾರಣವಾಗಬಹುದು. ಇನ್ನೂ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪನವರಿಗೆ ಪೂರ್ಣ ಸ್ವಾತಂತ್ರ್ಯ ಇಲ್ಲ.. ಇತ್ತ ಪಂಚರಾಜ್ಯಗಳ ಚುನಾವಣೆಯಲ್ಲಿ ಹೈಕಮಾಂಡ್ ಬ್ಯುಸಿಯಾಗಿದ್ದು ಕರ್ನಾಟಕದತ್ತ ತಲೆಕೆಡಿಸಿಕೊಳ್ಳೋಕೆ ಸಮಯವಿಲ್ಲ.
ಹೀಗೆ ಈಶ್ವರಪ್ಪ ಅವರಿಗಿರುವ ಪ್ಲಸ್ ಪಾಯಿಂಟ್, ಯಡಿಯೂರಪ್ಪ ಅವರಿಗೆ ಕಾಡುತ್ತಿರುವ ಕೆಲ ನೈತಿಕ ವಿಚಾರಗಳ ಕಾರಣದಿಂದಾಗಿಯೇ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಆರಂಭವಾಗಿರುವ ಆಂತರಿಕ ಕಲಹಕ್ಕೆ ಏಳೆಂಟು ತಿಂಗಳಾದರೂ ಅಂತ್ಯ ಹಾಡಲಾಗಿಲ್ಲ. ಚುನಾವಣೆಗೆ ಒಂದುವರೆ ವರ್ಷಗಳಿರುವ ಈ ಹೊತ್ತಲ್ಲಿನ ಪಕ್ಷದ ಆಂತರಿಕ ಬೆಳವಣಿಗೆ, ಪಕ್ಷದ ಕಾರ್ಯಕರ್ತರು ಆಸಕ್ತಿ ಕಳೆದುಕೊಂಳ್ಳುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.