
ಚಿಕ್ಕಬಳ್ಳಾಪುರ(ಜು.07): ಚುನಾವಣಾ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್ ನ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ಮುಖಂಡ ಎಚ್ ವಿಶ್ವನಾಥ್ ಪಕ್ಷ ತೊರೆದ ಬೆನ್ನಲ್ಲೇ ಮತ್ತೊಬ್ಬ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಟ್ವಿಟರ್'ನಲ್ಲಿ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಬರೆದುಕೊಂಡಿದ್ದಾರೆ. ಇದು ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ.
ಮುಂದಿನ ವರ್ಷ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿರೋ ಕಾಂಗ್ರೆಸ' ಗೆ ಆರಂಭಿಕ ವಿಘ್ನಗಳು ಶುರುವಾಗಿವೆ. ಒಬ್ಬರಾದಂತೆ ಒಬ್ಬರು ಪಕ್ಷ ತೊರೆಯುತ್ತಿದ್ದಾರೆ. ಆ ಸಾಲಿಗೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಕೂಡ ಸೇರ್ಪಡೆಯಾಗಿದ್ದು ಇಂದು ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
‘ಕೈ’ ಭಿನ್ನಮತ ಸ್ಫೋಟ
ರಾಜ್ಯ ಕಾಂಗ್ರೆಸ್'ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ರಾಜೀನಾಮೆ ನೀಡುವುದಾಗಿ ಟ್ವಿಟರ್'ನಲ್ಲಿ ಘೋಷಿಸಿದ್ದಾರೆ. ಇಂದು 11 ಗಂಟೆಗೆ ರಾಜೀನಾಮೆ ನೀಡುತ್ತಿದ್ದೇನೆ. ಕ್ಷೇತ್ರದ ಜನರಿಗೆ ನಾನು ಚಿರಋಣಿಯಾಗಿರುತ್ತೇನೆ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಸುಧಾಕರ್ ತಂದೆ ಪೇರೇಸಂದ್ರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೇಶವರೆಡ್ಡಿ ಕೂಡ ಕಾಂಗ್ರೆಸ್'ಗೆ ರಾಜೀನಾಮೆ ನೀಡಲಿದ್ದಾರೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ನಿನ್ನೆ ನಡೆದ ಕೆಪಿಸಿಸಿ ಸಭೆ.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಶಾಸಕ ಸುಧಾಕರ್ ತಂದೆ ಕೇಶವರೆಡ್ಡಿ ವಿರುದ್ಧ ವೀರಪ್ಪ ಮೊಯ್ಲಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಶವರೆಡ್ಡಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ತಂದೆ ರಾಜೀನಾಮೆ ಕೇಳಿದ್ದರಿಂದ ಸಿಟ್ಟಿಗೆದ್ದ ಸುಧಾಕರ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಟ್ವಿಟರ್'ನಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್'ನಲ್ಲಿ ಮೊದಲಿನಿಂದಲೂ ಸುಧಾಕರ್, ವೀರಪ್ಪ ಮೋಯ್ಲಿ ನಡುವೆ ವೈಮನಸ್ಯ ಇದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಒಕ್ಕಲಿಗ ಕೋಟಾದಿಂದ ಸಚಿವರಾಗಲು ಪ್ರಯತ್ನಿಸಿದ್ದ ಸುಧಾಕರ್'ಗೆ ಸಂಸದ ವೀರಪ್ಪ ಮೊಯ್ಲಿ ಅಡ್ದಗಾಲು ಹಾಕಿದ್ರಂತೆ. ಈಗ ಮೊಯ್ಲಿ ಬೆಂಬಲಿಗರು ತಂದೆ ಕೇಶವರೆಡ್ಡಿಗೂ ಅಡ್ಡಗಾಲು ಹಾಕಿರುವುದು ತಂದೆ-ಮಗನನ್ನು ಕೆರಳಿಸಿದೆ. ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸುಧಾಕರ್ ಮನವೊಲಿಕೆಗೆ ಯತ್ನಿಸಿದರೂ ಅದು ವಿಫಲವಾಗಿದೆ ಎನ್ನಲಾಗುತ್ತಿದೆ.
ಇನ್ನೂ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ತಂದೆ-ಮಕ್ಕಳು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ. ಎಸ್.ಎಂ.ಕೃಷ್ಣ ನಿಕಟವರ್ತಿಯಾಗಿರುವ ಸುಧಾಕರ್ ಅವರ ಹಾದಿ ತುಳಿಯಲಿದ್ದಾರೆ ಎನ್ನುತ್ತಿದೆ ರಾಜಕೀಯ ವಲಯ. ಒಟ್ಟಾರೆ ಚುನಾವಣೆ ಹೊಸ್ತಿಲಲ್ಲಿರುವ ಕಾಂಗ್ರೆಸ್'ಗೆ ಸುಧಾಕರ್ ಡಿಢೀರ್ ರಾಜೀನಾಮೆ ಭಾರೀ ಮುಖಭಂಗ ಆದಂತಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.