ರಮೇಶ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು: ಭೀಮಾನಾಯ್ಕ್'ಗೆ ದುಡ್ಡು ಕೊಟ್ಟಿದ್ದು ಫೈಟರ್ ರವಿ

By Suvarna web DeskFirst Published Dec 21, 2016, 8:47 PM IST
Highlights

ವಿಶೇಷ ಭೂ ಸ್ವಾಧೀನ ಅಧಿಕಾರಿ ಎಲ್.ಭೀಮಾನಾಯ್ಕ್ ಅವರು ತಮ್ಮ ಕಾರು ಚಾಲಕ ರಮೇಶ್ ಮೂಲಕ ಬದಲಾವಣೆ ಮಾಡಲು ನೀಡಿದ್ದ 50 ಲಕ್ಷ ರೂಪಾಯಿ ಮೌಲ್ಯದ ಹಳೇ ನೋಟುಗಳ ವಾರಸುದಾರರು ಯಾರು? ಮತ್ತು ಈ ಹಣದ ಮೂಲ ಯಾವುದು ಎಂಬುದನ್ನು  ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು(ಡಿ.22): ವಿಶೇಷ ಭೂ ಸ್ವಾಧೀನ ಅಧಿಕಾರಿ ಎಲ್.ಭೀಮಾನಾಯ್ಕ್ ಅವರು ತಮ್ಮ ಕಾರು ಚಾಲಕ ರಮೇಶ್ ಮೂಲಕ ಬದಲಾವಣೆ ಮಾಡಲು ನೀಡಿದ್ದ 50 ಲಕ್ಷ ರೂಪಾಯಿ ಮೌಲ್ಯದ ಹಳೇ ನೋಟುಗಳ ವಾರಸುದಾರರು ಯಾರು? ಮತ್ತು ಈ ಹಣದ ಮೂಲ ಯಾವುದು ಎಂಬುದನ್ನು  ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಕಾರು ಚಾಲಕ ರಮೇಶ್​ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು,ಪ್ರಕರಣದ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ರಮೇಶ್​ ಆತ್ಮಹತ್ಯೆಗೆ ಕಾರಣವಾಗಿದೆ ಅಂತ ಹೇಳಲಾಗುತ್ತಿರುವ 50 ಲಕ್ಷ ರೂಪಾಯಿ ನಿಜವಾದ ವಾರಸುದಾರ ಕ್ರಿಕೆಟ್ ಬುಕ್ಕಿ ಫೈಟರ್ ರವಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. 50 ಲಕ್ಷದ ಹಳೇ ನೋಟುಗಳನ್ನು ಭೀಮಾನಾಯ್ಕರಿಗೆ ಕೊಟ್ಟಿದ್ದು ಕ್ರಿಕೆಟ್​ ಬುಕ್ಕಿ ಫೈಟರ್ ರವಿ ಎಂಬುದು ಸಿಐಡಿ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಭೀಮಾನಾಯ್ಕ್'ಗೆ  ರವಿಯನ್ನು ಪರಿಚಯಿಸಿದ್ದು ಯಾರು?

ಸಂಸದ ಶ್ರೀರಾಮುಲು ಅವರ ಗನ್ ಮ್ಯಾನ್ ಒಬ್ಬರು ಫೈಟರ್ ರವಿ ಎಂಬಾತನನ್ನು ಭೀಮಾನಾಯ್ಕ ಅವರಿಗೆ ಪರಿಚಯಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆಯಲ್ಲಿ ಹೊರಬಿದ್ದಿದೆ . ಹೀಗಾಗಿ ಸಂಸದ ಶ್ರೀರಾಮುಲು ಹಾಗೂ ಅವ್ರ ಗನ್ ಮ್ಯಾನ್ ಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು  ಸಿಐಡಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ವಿಚಾರಣೆ ವೇಳೆ ಭೀಮಾನಾಯ್ಕ್, 50 ಲಕ್ಷ ರೂಪಾಯಿ ನನ್ನದಲ್ಲ ಅಂತಾ ಹೇಳಿದ್ದಾರೆ. ಹೀಗಾಗಿ ಆ ನೋಟುಗಳು ಕ್ರಿಕೆಟ್‌ ಬೆಟ್ಟಿಂಗ್ ಸೇರಿವೆಯೇ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ.

ಫೈಟರ್ ರವಿ ಯಾರು?

ಕ್ರಿಕೆಟ್ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಫೈಟರ್ ರವಿ ಮತ್ತು ಈತನ ಸಹಚರರನ್ನು ಕೇಂದ್ರ ಅಪರಾಧ ವಿಭಾಗದ ಬಂಧಿಸಿದ್ದರು. ಇವರಿಂದ ಕಾರು, ರಿವಾಲ್ವರ್, ಲ್ಯಾಪ್‌ಟಾಪ್ ಮತ್ತು 20 ಲಕ್ಷ ರೂ.ನಗದು ಸೇರಿದಂತೆ 1 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಇನ್ನೂ ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್‌ಕುಮಾರ್ ವಿರುದ್ಧ  ರವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ. ಐಪಿಎಲ್ ಬೆಟ್ಟಿಂಗ್‌'ನಲ್ಲಿ  ಸಾಕಷ್ಟು  ಹಣ ವಸೂಲಿ ಮಾಡಿದ್ದಾರೆ. ಲಂಚ ನೀಡದಿದ್ದರೆ, ದರೋಡೆಕೋರರ ಪಟ್ಟಿಗೆ ಸೇರ್ಪಡೆ ಮಾಡೋದಾಗಿ ಬೆದರಿಕೆ ಹಾಕಿದ್ದರು ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ  ಈ ಪ್ರಕರಣದಲ್ಲಿ ಇನ್ಯಾರರು ಭಾಗಿಯಾಗಿದ್ದಾರೆ ಎಂಬುದು ಸಿಐಡಿ ತನಿಖೆಯಿಂದ ಹೊರಬೀಳಬೇಕಾಗಿದೆ.

 

click me!