
ಮೆಹ್ಸಾನಾ(ಡಿ.21): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಸಹಾರಾ ಗ್ರೂಪ್ ಮತ್ತು ಬಿರ್ಲಾ ಕಂಪನಿಯಿಂದ ಕಿಕ್'ಬ್ಯಾಕ್ ಪಡೆದಿದ್ದು, 6 ತಿಂಗಳ ಅವಧಿಯಲ್ಲಿ 9 ಬಾರಿ ಲಂಚದ ಮೊತ್ತ ಮೋದಿಯವರಿಗೆ ಹೋಗಿದೆ ಎಂದೂ ರಾಹುಲ್ ಹೇಳಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದ್ದು, ರಾಹುಲ್‌ರನ್ನು ದಗಾಕೋರ ಎಂದು ಕರೆದಿದೆ.
ಇಂದು ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್'ನ ಮೆಹ್ಸಾನಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ‘‘ಅಕ್ಟೋಬರ್ 2013ರಿಂದ ಫೆಬ್ರವರಿ 2014ರವರೆಗಿನ ಅವಧಿಯಲ್ಲಿ ಸಹಾರಾ ಕಂಪನಿಯು ಮೋದಿಯವರಿಗೆ 40 ಕೋಟಿ ರೂಪಾಯಿ ಕಿಕ್'ಬ್ಯಾಕ್ ನೀಡಿದೆ. 2014ರ ನವೆಂಬರ್'ನಲ್ಲಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾಗ ದೊರೆತ ದಾಖಲೆಗಳಲ್ಲಿ ಈ ಎಲ್ಲ ಅಂಶಗಳೂ ಇವೆ. ಬಿರ್ಲಾ ಕಂಪನಿಯು ‘ಗುಜರಾತ್ ಸಿಎಂ’ಗೆ 12 ಕೋಟಿ ರೂಪಾಯಿ ನೀಡಿರುವ ದಾಖಲೆಗಳೂ ಇವೆ. ಕಳೆದ ಎರಡೂವರೆ ವರ್ಷಗಳಿಂದ ಈ ದಾಖಲೆಗಳು ಐಟಿ ಇಲಾಖೆ ಕೈಯ್ಯಲ್ಲಿದ್ದರೂ, ಇಲಾಖೆಯ ಮೋದಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ,’’ ಎಂದು ಆರೋಪಿಸಿದ್ದಾರೆ.
ತಮ್ಮ ಭಾಷಣದಲ್ಲಿ ಮೋದಿಗೆ ಕಿಕ್'ಬ್ಯಾಕ್ ಬಂದಿದೆ ಎನ್ನಲಾದ ದಿನಾಂಕಗಳನ್ನು ಮತ್ತು ಮೊತ್ತವನ್ನು ರಾಹುಲ್ ಓದಿ ಹೇಳಿದ್ದಾರೆ. ಜತೆಗೆ, ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
‘‘ನೀವು ದೇಶದ ನಾಗರಿಕರ ಪ್ರಾಮಾಣಿಕತೆ ಬಗ್ಗೆ, ಅವರು ಕಷ್ಟಪಟ್ಟು ದುಡಿದ ಹಣದ ಬಗ್ಗೆ ಅನುಮಾನ ಪಡುತ್ತೀರಿ. ಆದರೆ, ಈಗ ನೀವು ಕಿಕ್'ಬ್ಯಾಕ್ ಪಡೆದಿದ್ದು ನಿಜವೇ, ಆ ಬಗ್ಗೆ ತನಿಖಾ ಸಮಿತಿಯನ್ನು ಯಾವಾಗ ರಚಿಸುತ್ತೀರಿ ಎಂಬುದು ನಮಗೆ ಗೊತ್ತಾಗಬೇಕು,’’ ಎಂದಿದ್ದಾರೆ ರಾಹುಲ್.
ಗಂಗೆಯಷ್ಟೇ ಪವಿತ್ರ: ಇದೇ ವೇಳೆ, ರಾಹುಲ್ ಆರೋಪವನ್ನು ಬಿಜೆಪಿ ನಾಯಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ‘‘ಪ್ರಧಾನಿ ಮೋದಿ ಅವರು ಗಂಗೆಯಷ್ಟೇ ಪವಿತ್ರರು. ರಾಹುಲ್ ಅವರ ಬೇಜವಾಬ್ದಾರಿಯುತ, ನಾಚಿಕೆಗೇಡಿನ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದನ್ನು ಜನ ನಂಬುವುದಿಲ್ಲ. ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ಕಾಂಗ್ರೆಸ್ ಮತ್ತು ‘ಕುಟುಂಬ’ದ ಹೆಸರು ಕೇಳಿಬಂದಿದೆ. ಅದರಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂಥ ಆರೋಪ ಮಾಡಲಾಗುತ್ತಿದೆ,’’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇದೇ ವೇಳೆ, ‘‘ರಾಹುಲ್ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಚಿಕ್ಕ ಮಕ್ಕಳು ಕೂಡ ಅವರನ್ನು ತಮಾಷೆ ಮಾಡುತ್ತಾರೆ,’’ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.