ಆಸ್ಪತ್ರೆಯಲ್ಲಿದ್ದಾಗ ವೈದ್ಯರಿಗೆ ಓದಲು ಜಯಲಲಿತಾ ಸೂಚಿಸಿದ ಆ ಪುಸ್ತಕ ಯಾವುದು ಗೊತ್ತಾ?

By Suvarna Web DeskFirst Published Dec 10, 2016, 3:23 PM IST
Highlights

ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ 12 ದಿನ ಇದ್ದು ಮರುಜೀವ ಪಡೆದುಕೊಂಡ ಆಚೆ ಬಂದಾಗಲೂ ಜಯಲಲಿತಾ ಅವರು ಆ ಪುಸ್ತಕದ ವಿಷಯವನ್ನು ಮರೆತಿರಲಿಲ್ಲ.

ಚೆನ್ನೈ(ಡಿ. 10): ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ದಾಖಲಾಗಿದ್ದ 74 ದಿನಗಳ ಕಾಲ ಅವರ ದಿನಚರಿ ಸಾಕಷ್ಟು ಜನರಿಗೆ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿದೆ. ಅದೇನೇ ಇರಲಿ, ಜಯಲಲಿತಾರಿಗೆ ಚಿಕಿತ್ಸೆ ನೀಡುತ್ತಿದ್ದ ಹೃದ್ರೋಗ ತಜ್ಞ ಡಾ. ಆರ್.ನರಸಿಂಹನ್ ಅವರಿಗೆ ಜಯಲಲಿತಾ ಅವರ ಇನ್ನೊಂದು ಮಗ್ಗುಲು ಕಂಡಿದೆ. ನರಸಿಂಹನ್ ಮತ್ತು ಜಯಲಲಿತಾ ಅವರ ಮಧ್ಯೆ ವೈದ್ಯ-ರೋಗಿ ಸಂಬಂಧದ ಜೊತೆಗೆ ಪುಸ್ತಕ ಪ್ರೀತಿಯು ಇಬ್ಬರನ್ನು ಹತ್ತಿರಕ್ಕೆ ತಂದಿತ್ತು. ಇಬ್ಬರೂ ಪುಸ್ತಕಗಳ ಕುರಿತು ಸಾಕಷ್ಟು ಬಾರಿ ಮಾತುಕತೆ, ಚರ್ಚೆ ನಡೆಸಿದ್ದರು. ಈ ವೇಳೆ, ಚೀನಾದ ಮಾಜಿ ಸರ್ವಾಧಿಕಾರಿ ಮಾವೋ ಜೆಡೋಂಗ್ ಅವರ ಜೀವನ ಕುರಿತ "ದ ಪ್ರೈವೇಟ್ ಲೈಫ್ ಆಫ್ ಚೇರ್ಮನ್ ಮಾವೋ" ಎಂಬ ಪುಸ್ತಕವನ್ನು ತಪ್ಪದೇ ಓದಬೇಕೆಂದು ಜಯಲಲಿತಾ ಅವರು ತಿಳಿಸಿದರೆಂದು ಡಾ. ನರಸಿಂಹನ್ ಹೇಳುತ್ತಾರೆ.

ಈ ಪುಸ್ತಕ ಬರೆದ ಡಾ. ಲೀ ಝಿಸುಯ್ ಅವರು ಮಾವೋ ಜೆಡಾಂಗ್ ಅವರಿಗೆ ಖಾಸಗಿ ವೈದ್ಯರಾಗಿ ದುಡಿದವರು. ಲೇಖಕರು ಮಾವೋನ ವಿವಿಧ ಮುಖಗಳನ್ನು ತಮ್ಮ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ. ಈ ಪುಸ್ತಕ ಜಯಲಲಿತಾ ಅವರ ಫೇವರಿಟ್ ಅಂತೆ. ಇದು ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುತ್ತದೆಂಬುದು ಅವರ ಅನಿಸಿಕೆಯಾಗಿತ್ತೆಂದು ವೈದ್ಯ ನರಸಿಂಹನ್ ಹೇಳುತ್ತಾರೆ.

ವೈದ್ಯ ನರಸಿಂಹನ್ ಅವರಿಗೆ ಪುಸ್ತಕ ಓದಿ ಎಂದು ಬರೀ ಬಿಟ್ಟಿ ಸಲಹೆ ಕೊಡದೇ ಆ ಪುಸ್ತಕದ ಪ್ರತಿಯನ್ನು ವೈದ್ಯರಿಗೆ ಕೊಡುವಂತೆ ತನ್ನ ಸೆಕ್ರೆಟರಿಗೆ ಸೂಚಿಸಿದ್ದರು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ 12 ದಿನ ಇದ್ದು ಮರುಜೀವ ಪಡೆದುಕೊಂಡ ಆಚೆ ಬಂದಾಗಲೂ ಜಯಲಲಿತಾ ಅವರು ಆ ಪುಸ್ತಕದ ವಿಷಯವನ್ನು ಮರೆತಿರಲಿಲ್ಲ. ವೈದ್ಯರಿಗೆ ಪುಸ್ತಕ ತಲುಪಿತೇ ಎಂದು ಮತ್ತೊಮ್ಮೆ ತಮ್ಮ ಸೆಕ್ರೆಟರಿಯವರಲ್ಲಿ ಕೇಳಿದ್ದರಂತೆ. ಬಹುಶಃ ಈ ಘಟನೆಯು ಜಯಲಲಿತಾ ಅವರ ಬೇರೆ ಮುಖಗಳನ್ನು ಬಿಂಬಿಸುವಂತಿವೆ.

click me!