ನಗರಕ್ಕೆ ಉಗ್ರರ ಪ್ರವೇಶ : ಪೊಲೀಸ್‌ ಆಯುಕ್ತರು ಹೇಳೀದ್ದೇನು?

By Web DeskFirst Published May 7, 2019, 9:17 AM IST
Highlights

ನಗರಕ್ಕೆ ಉಗ್ರರು ಪ್ರವೇಶಿಸಿದ್ದಾರೆ ಎನ್ನುವ ವಿಚಾರಕ್ಕೆ ಇದೀಗ ಬೆಂಗಳೂರು ಪೊಲೀಸರು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. 

ಬೆಂಗಳೂರು : ಶ್ರೀಲಂಕಾದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ಮಾದರಿಯಲ್ಲೇ ಐಟಿ ಕಂಪನಿ ಮೇಲೆ ದಾಳಿ ನಡೆಸಲು ಬೆಂಗಳೂರಿಗೆ ಇಬ್ಬರು ಮಹಿಳೆಯರು ಸೇರಿ ನಾಲ್ವರು ಉಗ್ರರು ಪ್ರವೇಶಿಸಿದ್ದಾರೆ ಎಂಬ ವದಂತಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ನಗರ ಪೊಲೀಸರು ಸೋಮವಾರ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ‘ಬೆಂಗಳೂರಿಗೆ ಉಗ್ರರ ಪ್ರವೇಶವಾಗಿದೆ’ ಎಂಬುದು ಸುಳ್ಳು ಸುದ್ದಿಯಾಗಿದೆ. ಈ ತರಹದ ಊಹಾಪೋಹಗಳಿಗೆ ನಾಗರಿಕರು ಸ್ಪಂದಿಸಬಾರದು. ಹಾಗೂ ಆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳದಂತೆ ಟ್ವಿಟರ್‌ನಲ್ಲಿ ಪೊಲೀಸರು ವಿನಂತಿಸಿಕೊಂಡಿದ್ದಾರೆ.

‘ಶ್ರೀಲಂಕಾ ಮಾದರಿಯಲ್ಲಿ ಬೆಂಗಳೂರಿನಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದು, ಉಗ್ರರ ಟಾರ್ಗೆಟ್‌ ಐಟಿ ಕಂಪನಿಗಳಾಗಿವೆ. ಈಗಾಗಲೇ ಇಬ್ಬರು ಮಹಿಳೆಯರು ಸೇರಿ ನಾಲ್ವರು ಭಯೋತ್ಪಾದಕರು ನಗರಕ್ಕೆ ಬಂದಿದ್ದಾರೆ. ಹೀಗಾಗಿ ಐಟಿ ಕಂಪನಿಗಳು ಹೆಚ್ಚಿರುವ ವೈಟ್‌ಫೀಲ್ಡ್‌ ಹಾಗೂ ಬೆಳ್ಳಂದೂರು ಪ್ರದೇಶದ ನಾಗರಿಕರು ಎಚ್ಚರವಹಿಸಿ’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಶಂಕಿತ ಉಗ್ರರ ಫೋಟೋ ಸಹಿತ ಸುದ್ದಿ ವೈರಲ್‌ ಆಗಿದೆ. ಈ ವದಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿತ್ತು.

ಇತ್ತೀಚಿಗೆ ಶ್ರೀ ಲಂಕಾದಲ್ಲಿ ಈಸ್ಟ್‌ ಸಂಡೆ ದಿನಾಚರಣೆ ವೇಳೆ ನಡೆದ ಉಗ್ರರ ವಿಧ್ವಂಸಕ ಕೃತ್ಯಕ್ಕೆ ಎಂಟು ಕನ್ನಡಿಗರು ಸೇರಿದಂತೆ 200ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಈ ದುರಂತದ ಬಳಿಕ ಕೆಲ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ಸಹ ಉಗ್ರರ ದಾಳಿ ನಡೆಯಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗುಲ್ಲೆಬ್ಬಿಸುತ್ತಿದ್ದಾರೆ. ಅಲ್ಲದೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸಹ ಕರೆಗಳು ಬರುತ್ತಿವೆ. ಈಗ ವದಂತಿಗಳನ್ನು ಪರಿಶೀಲಿಸಿ ಅವುಗಳ ಅಸಲಿತನ ಪತ್ತೆ ಮಾಡುವುದು ಪೊಲೀಸರಿಗೆ ತಲೆಬಿಸಿಯಾಗಿದೆ. ಬಾಂಬ್‌ ಸ್ಫೋಟದ ವಿಚಾರವನ್ನು ಲಘುವಾಗಿ ತಳ್ಳಿಹಾಕುವಂತಿಲ್ಲ, ಹಾಗೆ ಗಂಭೀರವಾಗಿಯೂ ಪರಿಗಣಿಸುವಂತಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ನಗರದಲ್ಲಿ ಸುಳ್ಳು ಬೆದರಿಕೆ ಕರೆ ಪ್ರಕರಣದಲ್ಲಿ ಮಾಜಿ ಸೈನಿಕ ಸೇರಿ ಇಬ್ಬರ ಬಂಧನವಾಗಿದೆ.

click me!