
ಹೈದರಾಬಾದ್(ಸೆ.09): ನಕ್ಸಲ್ ಸಿದ್ಧಾಂತ ಪ್ರತಿಪಾದಕ ‘ಗದ್ದರ್’ ಎಂದಾಕ್ಷಣ ಮೈಮೇಲೆ ಅಂಗಿ ಇಲ್ಲದ, ಕೆಂಪು ಟವೆಲ್ ಹೆಗಲಿಗೇರಿಸಿಕೊಂಡ, ಕೋಲು ಹಿಡಿದ ಆಂಧ್ರದ ಕ್ರಾಂತಿಕಾರಿ ಕವಿ- ಗಾಯಕ ನೆನಪಾ ಗುತ್ತಾರೆ. ಆದರೆ ಈಗಿನ ಗದ್ದರ್ ನೋಡಿದರೆ ಎಂಥವರೂ ಅವಾಕ್ಕಾಗುತ್ತಾರೆ. ತಮ್ಮ ಹಳೆಯ ವೇಷ-ಭೂಷಣ ತೊರೆದಿರುವ ಗದ್ದರ್ ಅಂಗಿ, ಪ್ಯಾಂಟ್, ಟೈ ಧರಿಸಿದ ರೂಪದಲ್ಲಿ ಕಾಣುತ್ತಾರೆ.
ನೀಟಾಗಿ ಶೇವ್ ಮಾಡುತ್ತಿದ್ದಾರೆ. ದೇಗುಲಗಳಿಗೆ ಸುತ್ತುತ್ತಿದ್ದಾರೆ. ಜತೆಗೆ ಚುನಾವಣಾ ರಾಜಕೀಯಕ್ಕೆ ಇಳಿಯಲೂ ತುದಿಗಾಲಿನಲ್ಲಿ ನಿಂತಿದ್ದಾರೆ. 71 ವರ್ಷದ ಗದ್ದರ್ ಅವರ ನಿಜ ನಾಮಧೇಯ ಗುಮ್ಮಾಡಿ ವಿಠಲ ರಾವ್. ಮಾವೋವಾದಿಗಳ ಸಿದ್ಧಾಂತಗಳನ್ನು ಹಾಡಿನ ಮೂಲಕವೇ ಪ್ರಸ್ತುತ ಪಡಿಸುತ್ತಾ ದೇಶಾದ್ಯಂತ ಗಮನ ಸೆಳೆದಿದ್ದರು. ಆದರೆ ಈಗ ಅವರು ಮಾವೋ ವಾದಿಗಳಿಂದ ದೂರ ಸರಿದಂತೆ ಕಾಣುತ್ತಿದೆ. ಚುನಾವಣೆ ಸ್ಪರ್ಧೆಯನ್ನು ನಕ್ಸಲರು ವಿರೋಧಿಸಿ ಕೊಂಡು ಬಂದಿದ್ದಾರೆ. ಆದರೆ ಗದ್ದರ್ ಮಾತ್ರ ಚುನಾವಣೆಗೆ ಇಳಿಯಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಹೋರಾಟ ಕಾರ್ಯಕ್ರಮವೊಂದರಲ್ಲಿ ನೂತನ ವೇಷದೊಂದಿಗೆ ಗದ್ದರ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು ರಾಜಕೀಯೇತರ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಂಡು ಸಕ್ರಿಯ ರಾಜಕೀಯ ಪ್ರವೇಶಿಸುವ ಉದ್ದೇಶವಿದೆ. ತೆಲಂಗಾಣದಲ್ಲಿನ ಬದಲಾವಣೆಯ ಶಕ್ತಿ ತಾವಾಗುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಗದ್ದರ್ ಕೈಜೋಡಿಸಲು ಉದ್ದೇಶಿರುವ ವ್ಯಕ್ತಿಗಳ ಪೈಕಿ ಜನಸೇನಾ ಪಕ್ಷದ ನೇತಾರ, ನಟ ಪವನ್ ಕಲ್ಯಾಣ ಕೂಡಾ ಒಬ್ಬರು ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.