
ಬೆಂಗಳೂರು (ಜ.12): ಅತ್ತೆ- ಮಾವನ ಕಿರುಕುಳ ಸಹಿಸಲಾರದೆ ಸಾಫ್ಟ್ ವೇರ್ ಉದ್ಯೋಗಿಯೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರ ಸಮೀಪದ ಐಡಿಯಲ್ ಹೋಮ್ಸ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ‘ಟೆಂಪಲ್ ಬೆಲ್’ ಅಪಾರ್ಟ್’ಮೆಂಟ್ ನಿವಾಸಿ ನಿರ್ಮಲಾ (25) ಮೃತ ದುರ್ದೈವಿ. ಫ್ಲ್ಯಾಟ್‌ನ ತಮ್ಮ ಕೊಠಡಿಯಲ್ಲಿ ರಾತ್ರಿ 7 ಗಂಟೆಗೆ ಸುಮಾರಿಗೆ ನಿರ್ಮಲಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ನಿರ್ಮಲಾ ಅವರ ಅತ್ತೆ ಪ್ರೇಮಾ ಹಾಗೂ ಮಾವ ನಾಗರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2016 ರ ಡಿಸೆಂಬರ್‌ನಲ್ಲಿ ಚಿಕ್ಕಮಗಳೂರಿನ ನಿರ್ಮಲಾ ಹಾಗೂ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ವಿಶ್ವನಾಥ್ ವಿವಾಹವಾಗಿದ್ದರು.
ಮರಣಪತ್ರ ಹರಿದು ಹಾಕಿದ ಅತ್ತೆ, ಮಾವ : ಆತ್ಮಹತ್ಯೆಗೂ ಮುನ್ನ ನಿರ್ಮಲಾ ಅವರು ತಾವು ಅನುಭವಿಸಿದ ಹಿಂಸೆ ಕುರಿತು ಒಂದು ಪುತ್ರದಲ್ಲಿ ಬರೆದಿದ್ದರು. ಆದರೆ ಈ ಪತ್ರ ಪೊಲೀಸರಿಗೆ ಕೈ ಸೇರಿದರೆ ತಮಗೆ ಸಂಕಷ್ಟವಾಗತ್ತದೆ ಎಂದು ಹೆದರಿದ ಮೃತಳ ಅತ್ತೆ ಮತ್ತು ಮಾವ, ಮನೆಗೆ ಪೊಲೀಸರು ಬರುವ ಮುನ್ನವೇ ಮರಣ ಪತ್ರವನ್ನು ಹರಿದು ಕಸದ ಬುಟ್ಟಿಗೆ ಹಾಕಿದ್ದರು. ಆದರೆ ರಾತ್ರಿ ಮನೆ ಪರಿಶೀಲನೆ ವೇಳೆ ಹರಿದ ಚೀಟಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅತ್ತೆ, ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದ ನಿರ್ಮಲಾ ಮೂರೇ ತಿಂಗಳಲ್ಲಿ ವಿಶ್ವನಾಥ್ ಅವರಿಗೆ ಕಂಪನಿಯು ಜಪಾನ್‌ಗೆ ವರ್ಗಾವಣೆ ಮಾಡಿತ್ತು. ಹೀಗಾಗಿ ಅತ್ತೆ-ಮಾವನ ಜತೆ ಐಡಿಯಲ್ ಹೋಮ್ಸ್‌ನ ಟೆಂಪಲ್ ಬೆಲ್ ಪ್ರೀಮಿಯರ್ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಲಾ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ನಿರ್ಮಲಾ ಅವರಿಗೆ ಅತ್ತೆ-ಮಾವನ ಜತೆ ಮನಸ್ತಾಪವಾಗಿತ್ತು. ಇದೇ ಕಲಹವು ಅವರ ಸಾವಿಗೂ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬುಧವಾರ ರಾತ್ರಿ 7 ಗಂಟೆಗೆ ಸಮಾರಿಗೆ ಪತಿ ಕರೆ ಮಾಡಿದ್ದ ನಿರ್ಮಲಾ, ‘ನೀವು ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ಹೋಗಿರುವುದು ಸರಿಯಲ್ಲ. ಅತ್ತೆ-ಮಾವ ತುಂಬಾ ತೊಂದರೆ ಕೊಡುತ್ತಿದ್ದಾರೆ. ಇವರ ಜತೆ ಇರಲಾಗುತ್ತಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಪತ್ನಿ ಮಾತಿನಿಂದ ಆತಂಕಗೊಂಡ ವಿಶ್ವನಾಥ್, ತಕ್ಷಣವೇ ಮರಳಿ ಕರೆ ಮಾಡಿದರೆ ನಿರ್ಮಲಾ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.
ಇದರಿಂದ ಮತ್ತಷ್ಟು ಭಯಗೊಂಡ ಅವರು, ಕೂಡಲೇ ತಂದೆಗೆ ಕರೆ ಮಾಡಿ ಪತ್ನಿ ಬೇಸರದಿಂದ ಮಾತನಾಡಿದ್ದ ಸಂಗತಿ ತಿಳಿಸಿದ್ದರು. ಆ ಸಂದರ್ಭದಲ್ಲಿ ನಡುಮನೆಯಲ್ಲಿ ಟೀವಿ ನೋಡುತ್ತ ಕುಳಿತಿದ್ದ ಅವರು, ಕೋಣೆಗೆ ಹೋಗಿ ನೋಡುವಷ್ಟರಲ್ಲಿ ನಿರ್ಮಲಾ ನೇಣಿಗೆ ಶರಣಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಕ್ಷಿಣೆಗೆ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೂ ನಿಂದಿಸುತ್ತಾರೆ ಎಂದು ಮಗಳು ಹೇಳುತ್ತಲೇ ಇದ್ದಳು. ಆಗ ನಾವೇ ಆಕೆಯನ್ನು ಸಂತೈಸಿ, ಮಾವನ ಮನೆಯಲ್ಲಿ ಅನುಸರಿಸಿಕೊಂಡು ಬಾಳ್ವೆ ನಡೆಸಬೇಕು ಎಂದು ಆಕೆಗೆ ಬುದ್ಧಿ ಹೇಳುತ್ತಿದ್ದೆವು. ಆದರೆ ಕೊನೆಗೆ ಅವರ ಹಿಂಸೆ ಸಹಿಸಲಾರದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆರೋಪಿಸಿ ಪೊಲೀಸರಿಗೆ ಮೃತರ ತಂದೆ ಪರಮೇಶ್ವರ ಶೆಟ್ಟಿ ದೂರು ನೀಡಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.