ಶೀಘ್ರ ಕಾಂಗ್ರೆಸ್, ಜೆಡಿಎಸ್ ಶಾಸಕರ ವಿರುದ್ಧ ಬಿಜೆಪಿ ಚಾರ್ಜ್ ಶೀಟ್

By Vijay MalagihalaFirst Published Jan 12, 2018, 7:51 AM IST
Highlights

ಇದುವರೆಗೆ ತುಸು ಆರಾಮಾಗಿಯೇ ಇದ್ದ ರಾಜ್ಯ ಬಿಜೆಪಿ ಮುಖಂಡರಿಗೆ ದಂಡಿಯಾಗಿ ಕ್ಲಾಸ್‌ವರ್ಕ್ ಮತ್ತು ಹೋಂವರ್ಕ್ ನೀಡುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೊಂದು ಕೆಲಸ ಕೊಟ್ಟಿದ್ದಾರೆ.

ಬೆಂಗಳೂರು (ಜ.12): ಇದುವರೆಗೆ ತುಸು ಆರಾಮಾಗಿಯೇ ಇದ್ದ ರಾಜ್ಯ ಬಿಜೆಪಿ ಮುಖಂಡರಿಗೆ ದಂಡಿಯಾಗಿ ಕ್ಲಾಸ್‌ವರ್ಕ್ ಮತ್ತು ಹೋಂವರ್ಕ್ ನೀಡುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೊಂದು ಕೆಲಸ ಕೊಟ್ಟಿದ್ದಾರೆ.

ಪಕ್ಷದ ಶಾಸಕರಿರುವ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಎಲ್ಲ ಕ್ಷೇತ್ರಗಳಲ್ಲೂ ಹಾಲಿ ಶಾಸಕರ ವಿರುದ್ಧ ಪ್ರತ್ಯೇಕ ಚಾರ್ಜ್‌ಶೀಟ್ (ಆರೋಪ ಪಟ್ಟಿ) ಸಿದ್ಧಪಡಿಸುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ.

ಹಿಂದೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ರೀತಿಯ ಚಾರ್ಜ್‌ಶೀಟ್ ಪ್ರಯೋಗ ಮಾಡಲಾಗಿತ್ತು. ಅಲ್ಲಿನ ಸಮಾಜವಾದಿ ಪಕ್ಷವನ್ನು ಮಟ್ಟ ಹಾಕಿ ಗೆಲುವು ಸಾಧಿಸುವಲ್ಲಿ ಈ ತಂತ್ರಗಾರಿಕೆ ಕೈಹಿಡಿದದ್ದು ಸಾಬೀತಾಗಿರು ವುದರಿಂದ ಆ ಮಾದರಿಯನ್ನು ಕರ್ನಾಟಕದಲ್ಲೂ ಜಾರಿ ಗೊಳಿಸಲು ಶಾ ಮುಂದಾಗಿದ್ದಾರೆ.

ರಾಜ್ಯವನ್ನು ದೃಷ್ಟಿಯಾಗಿಟ್ಟುಕೊಂಡು ಆಡಳಿತಾರೂಢ ಪಕ್ಷದ ವಿರುದ್ಧ ಒಂದು ಸಮಗ್ರ ಚಾರ್ಜ್‌ಶೀಟ್ ಸಿದ್ಧಪಡಿಸಿ ಅದನ್ನು ಬಿಡುಗಡೆ ಮಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವಂಥದ್ದು. ಆದರೆ, ಈ ಬಾರಿ ಬಿಜೆಪಿಯೇತರ ಎಲ್ಲ ಶಾಸಕರ ವಿರುದ್ಧ ಕ್ಷೇತ್ರವಾರು ಆರೋಪಪಟ್ಟಿ ಸಿದ್ಧಪಡಿಸಿ ಅದನ್ನು ಕಿರುಹೊತ್ತಿಗೆ ರೂಪದಲ್ಲಿ ಆಯಾ ಕ್ಷೇತ್ರಾದ್ಯಂತ ವಿತರಿಸುವ ರಣತಂತ್ರ ಹೆಣೆದಿರುವುದು ಕರ್ನಾಟಕದ ಮಟ್ಟಿಗೆ ಇದು ಮೊದಲು.

ಬರುವ ಫೆಬ್ರವರಿ ಅಂತ್ಯದೊಳಗೆ ಈ ಚಾರ್ಜ್‌ಶೀಟ್ ಸಿದ್ಧವಾಗಿರಬೇಕು. ಹಾಲಿ ಶಾಸಕರು ಇದುವರೆಗೆ ಮಾಡಿದ್ದೇನು? ಮಾಡಬೇಕಾಗಿದ್ದೇನು? ಏನೇನು ಹಗರಣ ಗಳಾಗಿವೆ? ಎಷ್ಟು ದುರುಪಯೋಗವಾಗಿದೆ?

ನೀಡಿದ ಭರವಸೆಗಳ ಪೈಕಿ ಯಾವುವು ಈಡೇರಿಲ್ಲ ಎಂಬಿತ್ಯಾದಿ ಮಾಹಿತಿಯನ್ನು ಅಂಕಿ ಅಂಶಗಳ ಸಮೇತ ಈ ಚಾರ್ಜ್‌ಶೀಟ್ ಒಳಗೊಂಡಿರಬೇಕು. ನಂತರ ಮಾರ್ಚ್ ವೇಳೆಗೆ ಚುನಾವಣಾ ಕಾವು ಏರುತ್ತಿರುವಂತೆ ಅದನ್ನು ಆಯಾ ವಿಧಾನಸಭಾ ಕ್ಷೇತ್ರದ ಎಲ್ಲೆಡೆ ಹಂಚಿಕೆ ಮಾಡಬೇಕು ಎಂಬ ನಿರ್ದೇಶನವನ್ನು ಅಮಿತ್ ಶಾ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಾಲೂಕಾಧ್ಯಕ್ಷರಿಗೆ ಹೊಣೆ: ಆಯಾ ಮಂಡಲ ಅಥವಾ ತಾಲೂಕು ಘಟಕದ ಅಧ್ಯಕ್ಷರು ಈ ಚಾರ್ಜ್‌ಶೀಟ್ ತಯಾರಿಸುವ ಹೊಣೆ ಹೊತ್ತುಕೊಳ್ಳಲಿದ್ದಾರೆ. ಅಲ್ಲಿನ ಯುವಮೋರ್ಚಾ ಘಟಕದ ಪದಾಧಿಕಾರಿಗಳು ಕ್ಷೇತ್ರಾದ್ಯಂತ ಸಂಚರಿಸಿ ಸ್ಥಳೀಯ ಶಾಸಕರ ವಿರುದ್ಧ ಆರೋಪಗಳನ್ನು ಕಲೆ ಹಾಕಲಿದ್ದಾರೆ. ನಂತರ ಘಟಕದ ಮುಖಂಡರು ಸೇರಿ ಆಯಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಜತೆ ಚರ್ಚಿಸಿ ಯಾವ ಯಾವ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಬೇಕು ಎಂಬುದನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.

ಈ ಚಾರ್ಜ್‌ಶೀಟ್ ಸಿದ್ಧಪಡಿಸುವ ಸಂಬಂಧ ಈಗಾಗಲೇ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ಸಂದೇಶ ರವಾನೆಯಾಗಿದೆ. ಯುವಮೋರ್ಚಾ ಪದಾಧಿ ಕಾರಿಗಳಿಗೂ ಪ್ರತ್ಯೇಕ ಸಂದೇಶ ಕಳುಹಿಸಲಾಗಿದೆ. ದೊಡ್ಡ ಸವಾಲು: ರಾಜ್ಯದ ಮಟ್ಟಿಗೆ ಇದು ಹೊಸ ದಾಗಿದ್ದರಿಂದ ತಾಲೂಕು ಘಟಕದ ಪದಾಧಿ ಕಾರಿಗಳಿಗೆ ಸದ್ಯಕ್ಕೆ ಇದು ದೊಡ್ಡ ಸವಾಲಾಗಿಯೇ ಎದುರು ನಿಂತಂತಾಗಿದೆ. ಸಾಮಾನ್ಯ ವೈಫಲ್ಯಗಳನ್ನು ಪಟ್ಟಿ ಮಾಡುವುದು ಸುಲಭ.

ಆದರೆ, ಇಲ್ಲಿ ಕರಾರುವಕ್ಕಾಗಿ ಅಂಕಿ ಅಂಶಗಳ ಸಮೇತ ಸಿದ್ಧಪಡಿಸಬೇಕಾಗಿರುವುದರಿಂದ ಸ್ಥಳೀಯ ಮುಖಂಡರೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಯಾವಕಾಶವೂ ಇದೆ. ಫೆಬ್ರವರಿ ಅಂತ್ಯದೊಳಗೆ ಸಿದ್ಧಪಡಿ ಸಬೇಕಾಗಿದೆ. ಈಗಿನಿಂದಲೇ ಕೆಲಸ ಆರಂಭಿಸುತ್ತೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಮುಖಂಡರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

click me!