ವೃದ್ಧಾಶ್ರಮದಲ್ಲಿರುವ ನಿವೃತ್ತ ಚುನಾವಣಾ ಆಯುಕ್ತ ಟಿ.ಎನ್.ಶೇಷನ್

By Suvarna Web DeskFirst Published Jan 12, 2018, 8:08 AM IST
Highlights

ಐತಿಹಾಸಿಕ ಸುಧಾರಣೆಗಳನ್ನು ಜಾರಿಗೆ ತಂದು ದೇಶದ ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸಿದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಚೆನ್ನೈನಲ್ಲಿರುವ ವೃದ್ಧಾಶ್ರಮದಲ್ಲಿ ತಮ್ಮ ದಿನ ದೂಡುತ್ತಿದ್ದಾರೆ.

ಚೆನ್ನೈ (ಜ.12) : ಐತಿಹಾಸಿಕ ಸುಧಾರಣೆಗಳನ್ನು ಜಾರಿಗೆ ತಂದು ದೇಶದ ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸಿದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಚೆನ್ನೈನಲ್ಲಿರುವ ವೃದ್ಧಾಶ್ರಮದಲ್ಲಿ ತಮ್ಮ ದಿನ ದೂಡುತ್ತಿದ್ದಾರೆ.

ಗುರುಕುಲಂ ವಯೋವೃದ್ಧರ ಆಲಯದಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ 85 ವರ್ಷದ ಟಿ.ಎನ್. ಶೇಷನ್ ಅವರು ನೆಲೆಸಿದ್ದಾರೆ ಎಂದು ಹಿಂದಿ ದೈನಿಕವೊಂದು ವರದಿ ಮಾಡಿದೆ. ಶೇಷನ್ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಈ ದಂಪತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದ ಕಾರಣ, ಕೇರಳದ ಪಾಲಕ್ಕಾಡ್‌ನಲ್ಲಿ ಮನೆ ಇದ್ದರೂ ಶೇಷನ್ ದಂಪತಿ ವೃದ್ಧಾಶ್ರಮ ಸೇರಿರಬಹುದು ಎಂದು ಹೇಳಲಾಗುತ್ತಿದೆ. 

ಗುರುಕುಲಂ ವೃದ್ಧಾಶ್ರಮದಲ್ಲೇ ಡಿ.15ರಂದು ತಮ್ಮ ಹುಟ್ಟುಹಬ್ಬವನ್ನು ಶೇಷನ್ ಅವರು ಆಚರಿಸಿಕೊಂಡಿದ್ದಾರೆ.  ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಶೇಷನ್ ಅವರಿಗೆ ಪಿಂಚಣಿ ಬರುತ್ತದೆ. ಆ ಹಣದಲ್ಲಿ ಅವರು ವೃದ್ಧಾಶ್ರಮದಲ್ಲಿರುವ ಜನರಿಗೆ ಹಣಕಾಸು ನೆರವು ಒದಗಿಸುತ್ತಿದ್ದಾರೆ  ಎಂದು ‘ದೈನಿಕ್ ಜಾಗರಣ್’ ತಿಳಿಸಿದೆ. ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಅವರ ಭಕ್ತರಾಗಿದ್ದ ಶೇಷನ್ ಅವರ ಆರೋಗ್ಯ ಸಾಯಿಬಾಬಾ ನಿಧನಾನಂತರ ಕುಸಿದಿತ್ತು.

ಮೂರು ವರ್ಷಗಳ ಕಾಲ ವೃದ್ಧಾಶ್ರಮದಲ್ಲಿದ್ದ ಶೇಷನ್ ದಂಪತಿ ಬಳಿಕ ತಮ್ಮ ಮನೆಗೆ ಮರಳಿದ್ದರು. ಇದೀಗ ಮತ್ತೆ ವೃದ್ಧಾಶ್ರಮಕ್ಕೆ ವಾಪಸ್ ಬಂದಿದ್ದಾರೆ.

click me!