
ಬೆಂಗಳೂರು[ಜೂ.26]: ಕೇಂದ್ರ ಪಠ್ಯಕ್ರಮ ಅನುಸರಿಸುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆಂಬ ಸರ್ಕಾರದ ನಿರ್ದೇಶನ ಅನುಷ್ಠಾನವಾಗದಿದ್ದರೆ ಅದಕ್ಕೆ ಸಂಬಂಧಪಟ್ಟಬಿಇಒ ಮತ್ತು ಡಿಡಿಪಿಐ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಆರ್.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಕಲಿಸುವಲ್ಲಿ ನ್ಯೂನತೆಗಳು ಕಂಡು ಬಂದಲ್ಲಿ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೆಚ್ಚಿನ ಆಂಗ್ಲ ಮಾಧ್ಯಮ ಶಾಲೆ ಆರಂಭ:
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ವರ್ಷದಿಂದ ಆರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಹೆಚ್ಚಿನ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಬರುವ ದಿನಗಳಲ್ಲಿ ಹೆಚ್ಚಿನ ಶಾಲೆ ಆರಂಭಿಸುವುದಾಗಿ ಇದೇ ವೇಳೆ ಸಚಿವ ಶ್ರೀನಿವಾಸ್ ತಿಳಿಸಿದರು.
ಗ್ರಾಮೀಣ ಭಾಗದ ಹಾಗೂ ಬಡವರ ಮಕ್ಕಳೇ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾರೆ, ಹೀಗಾಗಿ ಕಾರ್ಪೋರೇಟ್ ಸಂಸ್ಥೆಗಳು ಇಂತಹ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.
2 ಸಾವಿರ ಶಿಕ್ಷಕರು ಮಾತ್ರ ಅರ್ಹ
11 ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕೇವಲ ಎರಡು ಸಾವಿರ ಶಿಕ್ಷಕರು ಮಾತ್ರ ಅರ್ಹರಾಗಿದ್ದಾರೆ. ಆಯ್ಕೆಗೆ ವಿಧಿಸಿದ್ದ ನಿಬಂಧನೆಗಳ ಕಾರಣದಿಂದ ಬಹಳಷ್ಟು ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು
ರಾಜ್ಯದಲ್ಲಿ ಕೆಲವು ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಶಿಕ್ಷಣ ನೀಡುತ್ತಿರುವುದು ಸಹ ತಮ್ಮ ಗಮನಕ್ಕೆ ಬಂದಿದ್ದು, ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳು ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ ತಾವು ಜಿಲ್ಲಾ ಹಾಗೂ ತಾಲೂಕುಗಳಿಗೆ ಪ್ರವಾಸ ಮಾಡಿ ಸಭೆ ನಡೆಸಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಗಳ ಕೊರತೆಯಿಂದ ಪ್ರತಿ ತಾಲೂಕಿನಲ್ಲಿ 20-30 ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ ಇಂತಹ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ನ್ನು ಕಲಿಸುವ ಮೂಲಕ ಮಕ್ಕಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಈ ಶಾಲೆಗಳಲ್ಲಿ ಮೂಲಭೂತ ಸೌರ್ಕಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ತಾವು ಭೇಟಿ ನೀಡಿದ ವೇಳೆ ನ್ಯೂನತೆ ಕಾಣಿಸಿದಲ್ಲಿ ಬಿಇಒ ಮತ್ತು ಡಿಡಿಪಿಐಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.