ತಮಿಳುನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಜಿ.ಬಾಲ ಬಂಧನ

By Suvarna Web DeskFirst Published Nov 5, 2017, 8:01 PM IST
Highlights

ಬಾಲು ಬಂಧನವಾದ ಬೆನ್ನಲ್ಲೇ ಟ್ವಿಟ್ಟರ್'ನಲ್ಲಿ ಕಾರ್ಟೂನಿಸ್ಟ್'ಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಸರಕಾರವು ವಾಕ್'ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಆಪಾದಿಸಲಾಗಿದೆ. #standwithcartoonistbala ಎಂಬ ಹ್ಯಾಷ್'ಟ್ಯಾಗ್ ಹೊಸ ಟ್ರೆಂಡ್ ಆಗಿದೆ.

ಚೆನ್ನೈ(ನ. 05): ತಿರುನೆಲ್ವೇಲಿ ಕಲೆಕ್ಟರ್ ಕಚೇರಿ ಆವರಣದಲ್ಲಿ ಕೂಲಿಕಾರ ಕುಟುಂಬವೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರುದ್ಧ ವ್ಯಂಗ್ಯಚಿತ್ರ ಬರೆದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಜಿ.ಬಾಲ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲ ಅವರು ಈ ವ್ಯಂಗ್ಯಚಿತ್ರವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು. ತಮಿಳುನಾಡಿನಾದ್ಯಂತ ಅತೀವ ಜನಪ್ರಿಯರಾಗಿರುವ ಬಾಲು ಅವರ ಈ ಕಾರ್ಟೂನು 40 ಸಾವಿರಕ್ಕೂ ಹೆಚ್ಚು ಶೇರ್ ಆಗಿವೆ.

ಈ ವ್ಯಂಗ್ಯಚಿತ್ರದಲ್ಲಿ ಸುಟ್ಟುಹೋಗುತ್ತಿರುವ ಮಗುವನ್ನು ರಕ್ಷಿಸದೇ ಪೊಲೀಸ್ ಕಮಿಷನರ್, ನೆಲ್ಲೈ ಕಲೆಕ್ಟರ್ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಹಣದ ಕಂತೆ ಮೂಲಕ ತಮ್ಮ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿರುವಂತೆ ಬಿಂಬಿಸಲಾಗಿದೆ. ಇದು ತಮಿಳುನಾಡು ಸರಕಾರಕ್ಕೆ ಇರಿಸುಮುರುಸು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಜಿ.ಬಾಲು ಬಂಧನವಾಗಿದೆ ಎನ್ನಲಾಗಿದೆ.

ಆದರೆ, ಬಾಲು ಬಂಧನವಾದ ಬೆನ್ನಲ್ಲೇ ಟ್ವಿಟ್ಟರ್'ನಲ್ಲಿ ಕಾರ್ಟೂನಿಸ್ಟ್'ಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಸರಕಾರವು ವಾಕ್'ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಆಪಾದಿಸಲಾಗಿದೆ. #standwithcartoonistbala ಎಂಬ ಹ್ಯಾಷ್'ಟ್ಯಾಗ್ ಹೊಸ ಟ್ರೆಂಡ್ ಆಗಿದೆ.

ಆತ್ಮಹತ್ಯೆ ಯಾಕಾಯ್ತು?
ಕೂಲಿಕಾರ ಏಕಾಸಿಮುತ್ತು ಸಾಲಗಾರರ ಕಾಟದಿಂದ ಬೇಸತ್ತುಹೋಗಿರುತ್ತಾನೆ. ತೆಗೆದುಕೊಂಡ ಸಾಲಕ್ಕಿಂತ ಹೆಚ್ಚಿನ ಹಣವನ್ನು ವಾಪಸ್ ಮಾಡಿದ್ದರೂ ಸಾಲಗಾರರು ತನ್ನನ್ನ ಗೋಳು ಹುಯ್ದುಕೊಳ್ಳುತ್ತಿದ್ದಾರೆಂದು ಆತ ಹಲವು ಬಾರಿ ದೂರು ನೀಡಿರುತ್ತಾನೆ. ತನಗೆ ನ್ಯಾಯ ಕೊಡಿಸುವಂತೆ ಕಲೆಕ್ಟರ್ ಕಚೇರಿಯಲ್ಲಿ 6 ಬಾರಿ ಮನವಿ ಮಾಡಿಕೊಂಡಿರುತ್ತಾನೆ. ಆದರೆ, ಅಧಿಕಾರಿಗಳು ಮತ್ತು ಪೊಲೀಸರು ಸಾಲಗಾರ ರೌಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇದರಿಂದ ಹತಾಶನಾದ ಎಸಾಕಿಮುತ್ತು ಮತ್ತವನ ಕುಟುಂಬವು ತಿರುನಲ್ವೇಲಿ ಕಲೆಕ್ಟರ್ ಕಚೇರಿ ಆವರಣದಲ್ಲಿ ಅ.23ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತದೆ.

click me!