
ಚೆನ್ನೈ: ಕಾವೇರಿ ನದಿಗೆ ಮೇಕೆದಾಟು ಬಳಿ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆ ಬಗ್ಗೆ ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ, ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರವು ‘ಕೇಂದ್ರ ಜಲ ಆಯೋಗದ’ ಬಳಿ ಅನುಮತಿ ಕೋರಿರುವುದು ಏಕಪಕ್ಷೀಯ ನಿರ್ಧಾರ ಎಂದು ದೂರಿದ್ದಾರೆ.
ಈ ಕುರಿತು ಪ್ರಧಾನಿ ಮೋದಿಗೆ ಮಂಗಳವಾರ ಪತ್ರ ಬರೆದಿರುವ ತಮಿಳುನಾಡು ಸಿಎಂ ಪಳನಿಸ್ವಾಮಿ, ‘ಮೇಕೆದಾಟು ಜಲಾಶಯ ನಿರ್ಮಾಣ ಪ್ರಸ್ತಾಪಕ್ಕೆ ಕೇಂದ್ರ ಜಲ ಆಯೋಗದ ಅನುಮತಿ ಪಡೆಯಲು ಕರ್ನಾಟಕ ‘ಏಕಪಕ್ಷೀಯ’ವಾಗಿ ಪ್ರಯತ್ನಿಸುತ್ತಿದೆ. ಕರ್ನಾಟಕವು ಕೇಂದ್ರ ಜಲ ಆಯೋಗದ ಬಳಿ ತೆರಳಿರುವುದು ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿರುವ ಅಂತಿಮ ತೀರ್ಪು ಮತ್ತು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ’ ಎಂದು ಉಲ್ಲೇಖಿಸಿದ್ದಾರೆ.
‘5,912 ಕೋಟಿ ರು. ಮೌಲ್ಯದ ಮೇಕೆದಾಟು ಜಲಾಶಯ-ಕಮ್-ಕುಡಿಯುವ ನೀರು ಯೋಜನೆ ಕಾರ್ಯಸಾಧು ವರದಿಗೆ ಅನುಮತಿ ಕೋರುವಾಗ ಕರ್ನಾಟಕ, ತಮಿಳುನಾಡಿಗೆ ಮಾಹಿತಿ ನೀಡಿಲ್ಲ. ಹೀಗಾಗಿ ಅನುಮತಿ ನೀಡುವ ಮುಂದಿನ ಪ್ರಕ್ರಿಯೆ ತಡೆಗೆ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು. ಜೊತೆಗೆ ಕೇಂದ್ರ ಜಲ ಆಯೋಗವು, ಕರ್ನಾಟಕದ ಪ್ರಸ್ತಾಪವನ್ನು ಸ್ವೀಕರಿಸುವ ಬದಲು, ವಿಷಯಕ್ಕೆ ಸಂಬಂಧಿಸಿ ತಮಿಳುನಾಡಿನ ಸಮ್ಮತಿ ಪಡೆಯುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು’ ಎಂದೂ ಅವರು ಹೇಳಿದ್ದಾರೆ.
‘ಮೇಕೆದಾಟು ಬಳಿ ಜಲಾಶಯ ನಿರ್ಮಾಣದಿಂದ ಕಾವೇರಿಯಲ್ಲಿ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯಾಗಲಿದೆ. ಜೊತೆಗೆ ಇದು ನದಿಪಾತ್ರದ ರಾಜ್ಯಗಳ ನೀರು ಹಂಚಿಕೆ ನಿಯಮವನ್ನೂ ಉಲ್ಲಂಘಿಸುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ, ಅಂತಾರಾಜ್ಯ ನದಿ ನೀರು ಹಂಚಿಕೆ ವಿಷಯಗಳಿಗೆ ಸಂಬಂಧಿಸಿದಂತೆ ಮೇಲ್ದಂಡೆಯ ರಾಜ್ಯಗಳು ಕೆಳದಂಡೆಯ ರಾಜ್ಯಗಳ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಇದರ ಹೊರತಾಗಿಯೂ ಕರ್ನಾಟಕ ಅನುಸರಿಸಿರುವ ಕ್ರಮ ಸರಿಯಲ್ಲ. ಕರ್ನಾಟಕದ ಏಕಪಕ್ಷೀಯ ನಿರ್ಧಾರವು ಗಂಭೀರ ಕರೆಗಂಟೆಯಾಗಿದ್ದು, ಇದು ಕಾವೇರಿ ನದಿ ನೀರು ಅವಲಂಬಿಸಿರುವ ಲಕ್ಷಾಂತರ ರೈತರ ಜೀವನದ ಮೇಲೆ ಪರಿಣಾಮ ಬೀರುವುದರಿಂದ ತಮಿಳುನಾಡಿನ ಜನತೆ ಈ ಕುರಿತು ಸಂದೇಹ ಪಡುವಂತಾಗಿದೆ. ಹೀಗಾಗಿ ಈ ಕುರಿತ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶಿಸಲು ಜಲ ಸಂಪನ್ಮೂಲ ಸಚಿವಾಲಯಕ್ಕೆ ಸೂಚಿಸುವಂತೆ’ ಪ್ರಧಾನಿ ಮೋದಿಯವರನ್ನು ಪಳನಿಸ್ವಾಮಿ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.