ಮನೆಗೆಲಸದಾಕೆಗೆ ಸಂಬ್ಳ ಕೊಡದಿದ್ರೆ ಜೈಲೂಟ!

By Web DeskFirst Published Aug 2, 2018, 7:07 PM IST
Highlights

ಮನೆಗೆಲಸಕ್ಕೆ ವೇತನ ಕೊಡದಿದ್ದರೆ ಜೈಲು! ತಮಿಳುನಾಡು ಸರ್ಕಾರದ ಮಹತ್ವದ ನಿರ್ಧಾರ! ಮನೆಗೆಲಸಕ್ಕೂ ಕನಿಷ್ಠ ವೇತನ ನಿಗದಿ! ಅಸಂಘಟಿತ ವಲಯದ ಕಾರ್ಮಿಕರ ರಕ್ಷಣೆ

ಚೆನ್ನೈ(ಆ.2): ಮನೆಗೆಲಸದವರಿಗೆ ಸರ್ಕಾರ ನಿಗದಿಪಡಿಸಿದ ವೇತನಕ್ಕಿಂತ ಕಡಿಮೆ ಸಂಬಳ ನೀಡಿದರೆ, ಜೈಲುಶಿಕ್ಷೆ ಕಟ್ಟಿಟ್ಟ ಬುತ್ತಿ. ಇದು ತಮಿಳುನಾಡು ಸರ್ಕಾರದ ಹೊಸ ನಿಯಮ. ಸರ್ಕಾರ ಮನೆಗೆಲಸದವರಿಗೆ ಪ್ರತಿ ಗಂಟೆಗೆ 37 ರೂ. ಕನಿಷ್ಠ ವೇತನ ನಿಗದಿಪಡಿಸಿದ್ದು, ತರಬೇತಿ ಪಡೆದ ಕುಶಲ ಕೆಲಸಗಾರರಾಗಿದ್ದರೆ ಅದಕ್ಕೂ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. 

ಅಸಂಘಟಿತ ವಲಯದ ಕಾರ್ಮಿಕರ ರಕ್ಷಣೆಗೆ ಮುಂದಾಗಿರುವ ತಮಿಳುನಾಡು ಸರ್ಕಾರ, ಕುಶಲಿಗರಲ್ಲದ ಕಾರ್ಮಿಕರಿಗೆ 37 ರೂ. ಕನಿಷ್ಠ ವೇತನ ನೀಡುವಂತೆ ಆದೇಶಿಸಿದೆ. ಜೊತೆಗೆ ಅವರ ಕುಶಲತೆ ಮತ್ತು ಹೆಚ್ಚುವರಿ ತರಬೇತಿ, ಅರ್ಹತೆ ಮೇಲೆ ವೇತನ ಹೆಚ್ಚಳವಾಗುತ್ತದೆ. ಆದರೆ ನಿಗದಿತ ಮೊತ್ತಕ್ಕಿಂತ ಕಡಿಮೆ ವೇತನ ನೀಡಿದರೆ ಮಾತ್ರ, ಅಂತಹ ಮನೆ ಅಥವಾ ಸಂಸ್ಥೆ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲು ಅವಕಾಶವಿದ್ದು, ಆರೋಪ ಸಾಬೀತಾದರೆ ಜೈಲು ವಾಸದ ಶಿಕ್ಷೆಯೂ ಆಗಲಿದೆ. 

ಕೊಯಮತ್ತೂರ್‌ ಕಾರ್ಮಿಕ ಆಯುಕ್ತರ ನೇತೃತ್ವದ ೮ ಜನ ಸದಸ್ಯರ ಸಮಿತಿ ವೇತನ ಪರಿಷ್ಕರಣೆಯ ಶಿಫಾರಸು ಮಾಡಿದ್ದು, ಅದರಂತೆ ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಈ ವೇತನ ಮನೆ ಗುಡಿಸುವುದು, ಪಾತ್ರೆ ತೊಳೆಯುವುದು, ಒರೆಸುವುದು ಮತ್ತು ಬಟ್ಟೆ ಒಗೆಯುವುದು ಅಂತಹ ಕೆಲಸಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಹೋಮ್ ನರ್ಸ್‌, ಮಕ್ಕಳನ್ನು ನೋಡಿಕೊಳ್ಳುವುದು ಸಹಿತ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುವ ಕೆಲಸವಾಗಿದ್ದಲ್ಲಿ, ಮತ್ತಷ್ಟು ಹೆಚ್ಚಿನ ವೇತನ ನೀಡಬೇಕಾಗುತ್ತದೆ. 

click me!