
ಮೈಸೂರು[ಆ.02]: ಒಂದಲ್ಲ ಒಂದು ಪ್ರಯೋಗದಿಂದಲೇ ಹೆಸರು ಮಾಡುತ್ತಿರುವ ಮೈಸೂರಿನ ರಂಗಾಯಣವು ಹಿಂದೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನಾಟಕ ರೂಪಕ್ಕೆ ಇಳಿಸಿ ರಂಗಾಸಕ್ತರ ಹುಬ್ಬೇರಿಸಿತ್ತು.
ಇದೀಗ ಕುವೆಂಪು ರಚನೆಯ ‘ಶ್ರೀರಾಮಾಯಣ ದರ್ಶನಂ’ ಮಹಾ ಕಾವ್ಯವನ್ನು ರಂಗರೂಪಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಶ್ರೀರಾಮಾಯಣ ದರ್ಶನಂ’ ಕಾವ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಾಟಕ ರೂಪಕ್ಕೆ ಇಳಿಸಿ ನಾಡಿನ ಜನತೆಗೆ ತಲುಪಿಸಲು ರಂಗಾಯಣ ನಿರ್ದೇಶಕರು ಚಿಂತಿಸಿದ್ದಾರೆ.
ನಾಟಕ ನಿರ್ದೇಶನದ ಹೊಣೆಯನ್ನು ನೀನಾಸಂನ ಮಾಜಿ ಪ್ರಾಂಶುಪಾಲ ಕೆ.ಜಿ. ಮಹಾಬಲೇಶ್ವರ್ ಅವರಿಗೆ ವಹಿಸಿದ್ದು, ರಂಗಾಯಣದ ಕಲಾವಿದರೊಟ್ಟಿಗೆ ಇತರೆ ಸಹ ಕಲಾವಿದರನ್ನು ಸೇರಿಸಿಕೊಂಡು ನಾಟಕ ಮಾಡಿಸಲು ಅಣಿಗೊಳಿಸಲಾಗುತ್ತಿದೆ.
ಕುವೆಂಪು ಭಾಷೆಯಲ್ಲಿಯೇ ನಾಟಕ!:
ಕುವೆಂಪು ರಚಿಸಿರುವ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಭಾಷೆಯ ನಡುಗನ್ನಡದ್ದಾಗಿದೆ. ಮೂಲ ಕೃತಿಗೆ ಮತ್ತು ಭಾಷೆಗೆ ಯಾವುದೇ ಧಕ್ಕೆಯಾಗದಂತೆ ಸುಮಾರು 900 ಪುಟಗಳಷ್ಟಿರುವ ಕೃತಿಯನ್ನು 9 ಗಂಟೆಗೆ ನಾಟಕದ ಸ್ಕ್ರಿಪ್ಟ್ ಆಗಿ ಇಳಿಸಲಾಗಿದೆ. ಈ 9 ಗಂಟೆ ನಾಟಕವನ್ನು 4 ಗಂಟೆಗೆ ಇಳಿಸಲು ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಲಾಗುವುದು. ಚಂಪೂ ಕನ್ನಡ, ಹಳಗನ್ನಡ, ನಡುಗನ್ನಡ, ಹೊಸ ಗನ್ನಡ ಎಂಬುದು ಸಾಹಿತ್ಯ ಚರಿತ್ರೆ ಅಧ್ಯಯನ ಮಾಡಲಷ್ಟೇ ಹೊರತು ಸ್ವಾಭಾವಿಕವಾಗಿ ‘ಕನ್ನಡ’ ಒಂದೇ. ಆದ್ದರಿಂದ ಕುವೆಂಪು ಬಳಸಿರುವ ಭಾಷೆಯಲ್ಲಿಯೇ ನಾಟಕ ಸಿದ್ಧಪಡಿಸಲಾಗುವುದು ಎನ್ನುತ್ತಾರೆ ನಿರ್ದೇಶಕ ಕೆ.ಜಿ. ಮಹಾಬಲೇಶ್ವರ್.
ನಾಡಿನಾದ್ಯಂತ ಸಂಚಾರ
ಮಲೆಗಳಲ್ಲಿ ಮದುಮಗಳು ನಾಟಕ ನಾಲ್ಕು ವೇದಿಕೆಗಳಲ್ಲಿ ನಡೆಯುತ್ತಿದ್ದರಿಂದ ರಾಜ್ಯಾದ್ಯಂತ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಆದರೆ ‘ಶ್ರೀರಾಮಾಯಣ ದರ್ಶನಂ’ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸುವ ಸಲುವಾಗಿ 4 ಗಂಟೆಗೆ ಸೀಮಿತಗೊಳಿಸಲಾಗಿದೆ.
- ಉತ್ತನಹಳ್ಳಿ ಮಹದೇವ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.