ರಾಜೀವ್ ಗಾಂಧಿಗಾಗಿ ಬೋಫೋರ್ಸ್ ತನಿಖೆ ಸ್ಥಗಿತ!

By Suvarna Web DeskFirst Published Jan 26, 2017, 7:13 AM IST
Highlights

1980ರ ಅಂತ್ಯ ಭಾಗದಲ್ಲಿ ರಾಜೀವ್‌ ಗಾಂಧಿ ಸರ್ಕಾರದ ವಿರುದ್ಧ ಬಹುದೊಡ್ಡ ಹಗರಣವೊಂದು ಕೇಳಿಬಂದಿತ್ತು. ಈ ಕುರಿತು ತನಿಖೆ ಮುಂದುವರಿದರೆ ರಾಜೀವ್‌ ಗಾಂಧಿ ಅವರಿಗೆ ಸಂಕಷ್ಟ ಎದುರಾಗಬಹುದು ಎಂದು ಸ್ವೀಡನ್‌ ಸರ್ಕಾರ ಭಾವಿಸಿತ್ತು.

ನವದೆಹಲಿ: ಎಂಬತ್ತರ ದಶಕದ ಅಂತ್ಯದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದ ಬೋಫೋರ್ಸ್‌ ಫಿರಂಗಿ ಹಗರಣದ ತನಿಖೆಯಿಂದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಮುಜು​​ಗರಕ್ಕೆ ಸಿಲುಕ​ಬಹು​ದು ಎಂಬ ಕಾರಣಕ್ಕೆ ಸ್ವೀಡನ್‌ ಸರ್ಕಾರ 1988ರ ಜನವರಿ​ಯಲ್ಲಿ ತನಿಖೆಯನ್ನೇ ರದ್ದು​ಗೊಳಿಸಿತ್ತು ಎಂಬ ಕುತೂಹಲಕರ ಅಂಶವೊಂದು ಈಗ ಬೆಳಕಿಗೆ ಬಂದಿದೆ.

ವಿಶೇಷ ಎಂದರೆ, ಸ್ವೀಡನ್‌ ಸರ್ಕಾರ ತನಿಖೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು, ರಾಜೀವ್‌ ಅವರು ಆ ದೇಶಕ್ಕೆ ಭೇಟಿ ನೀಡಿದ ತರುವಾಯ ಎಂಬ ವಿಷಯವೂ ಬಹಿರಂಗವಾಗಿದೆ.

ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಹಿರಂಗಪಡಿಸಿರುವ ರಹಸ್ಯ ದಾಖಲೆಗಳಲ್ಲಿ ಈ ಮಾಹಿತಿ ಇದೆ. ಅದೂ ಅಲ್ಲದೆ ಬೋಫೋರ್ಸ್‌ ಫಿರಂಗಿ ಪೂರೈಕೆ ಗುತ್ತಿಗೆ ಹಿಡಿಯುವ ಸಲುವಾಗಿ ಸ್ವೀಡನ್‌ ಕಂಪನಿ ಭಾರತೀಯ ಅಧಿಕಾರಿಗಳು ಅಥವಾ ಮಧ್ಯವರ್ತಿಗಳಿಗೆ ಬಹುತೇಕ ನಿಶ್ಚಿತವಾಗಿ ಲಂಚ ಸಂದಾಯ ಮಾಡಿದೆ ಎಂದೂ ತಿಳಿಸಿದೆ.

1980ರ ಅಂತ್ಯ ಭಾಗದಲ್ಲಿ ರಾಜೀವ್‌ ಗಾಂಧಿ ಸರ್ಕಾರದ ವಿರುದ್ಧ ಬಹುದೊಡ್ಡ ಹಗರಣವೊಂದು ಕೇಳಿಬಂದಿತ್ತು. ಬೋಫೋರ್ಸ್‌ ಫಿರಂಗಿ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿ ಅವುಗಳ ಸರಬರಾಜು ಗುತ್ತಿಗೆ ಹಿಡಿಯುವ ಸಲುವಾಗಿ ಲಂಚ ಸಂದಾಯ ಮಾಡಿದೆ ಎಂಬ ವಿಷಯ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಕುರಿತು ತನಿಖೆ ಮುಂದುವರಿದರೆ ರಾಜೀವ್‌ ಗಾಂಧಿ ಅವರಿಗೆ ಸಂಕಷ್ಟ ಎದುರಾಗಬಹುದು ಎಂದು ಸ್ವೀಡನ್‌ ಸರ್ಕಾರ ಭಾವಿಸಿತ್ತು. ಬೋಫೋರ್ಸ್‌ ಫಿರಂಗಿ ಉತ್ಪಾದಕ ಕಂಪನಿ ಕೂಡ ಲಂಚಾವತಾರ ಪ್ರಕರಣದಿಂದ ಬಚಾವಾಗಲು ಬಯಸಿತ್ತು. ಈ ಕಾರಣದಿಂದ ತನಿಖೆಯನ್ನು ಸ್ವೀಡನ್‌ ಸರ್ಕಾರ ಹಿಂಪಡೆಯಿತು.

ಆದರೆ ಅದಕ್ಕೂ ಮುನ್ನ ಭಾರತ ಹಾಗೂ ಸ್ವೀಡನ್‌ ಸಹಕಾರಯುತ ನಿರ್ಧಾರಕ್ಕೆ ಬಂದವು. ಆ ಪ್ರಕಾರ, ಹಣ ಪಾವತಿ ಕುರಿತ ವಿಷಯಗಳನ್ನು ರಹಸ್ಯವಾಗಿಡಲು ತೀರ್ಮಾನಿಸಲಾಗಿತ್ತು ಎಂಬ ಅಂಶ ಸಿಐಎ ದಾಖಲೆಗಳಲ್ಲಿ ಇದೆ.

2004ರಲ್ಲಿ ದೆಹಲಿಯ ನ್ಯಾಯಾಲಯ​ವೊಂದು ಬೋಫೋರ್ಸ್‌ ಹಗರಣದಲ್ಲಿ ರಾಜೀವ್‌ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳುವ ಮೂಲಕ ಅವರಿಗೆ ಕ್ಲೀನ್‌'ಚಿಟ್‌ ನೀಡಿತ್ತು.

ದಾಖಲೆಯಲ್ಲಿ ಏನಿದೆ?
* 1980ರ ಅಂತ್ಯದಲ್ಲಿ ರಾಜೀವ್‌ ಸರ್ಕಾರ ಹಗರಣಕ್ಕೆ ಸಿಲುಕಿತ್ತು
* ಬೋಫೋರ್ಸ್‌ ಕಂಪನಿ ಲಂಚ ನೀಡಿದ್ದು ಕೋಲಾಹಲ ಸೃಷ್ಟಿಸಿತ್ತು
* ಫಿರಂಗಿ ಡೀಲ್‌ಗಾಗಿ ಬೋಫೋರ್ಸ್‌ ಕಂಪನಿ ಲಂಚ ನೀಡಿದ್ದು ನಿಜ
* ಈ ಬಗ್ಗೆ ಸ್ವೀಡನ್‌ ಸರ್ಕಾರ ತನ್ನ ದೇಶದಲ್ಲಿ ತನಿಖೆ ಕೈಗೊಂಡಿತ್ತು
* ಆದರೆ, ರಾಜೀವ್‌ಗೆ ಸಂಕಷ್ಟವಾಗ ಬಹುದೆಂದು ತನಿಖೆ ನಿಲ್ಲಿಸಿತು
* ಹಣ ಪಾವತಿ ರಹಸ್ಯವಾಗಿಡಲು ಸ್ವೀಡನ್‌, ಭಾರತ ನಿರ್ಧರಿಸಿದವು

(epaper.kannadaprabha.in)

click me!