ಓದಲಿಲ್ಲ, ಬರೆಯಲಿಲ್ಲ, ದೇಶಿಯ ಬದನೆಕಾಯಿ ಬೆಳೆದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಸಾಧಕಿ ಅಜ್ಜಿ ಲಕ್ಷ್ಮೀಬಾಯಿ

By Suvarna Web DeskFirst Published Apr 29, 2017, 4:38 AM IST
Highlights

ಆ ಅಜ್ಜಿಗೆ ಬರೋಬ್ಬರಿ 80 ವರ್ಷ, ಅವರು ಓದಲಿಲ್ಲ, ಬರೆಯಲಿಲ್ಲ, ಆದ್ರೆ ತವರುಮನೆಯಿಂದ ಗಂಡನ ಮನೆಗೆ ತಂದ ದೇಶಿಯ ಬೀಜಗಳಿಂದ ಸ್ಪೇಷಲ್​ ಬದನೆಕಾಯಿಗಳನ್ನ ಬೆಳೆಯೋ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿ ದೇಶದ ರಾಷ್ಟ್ರಪತಿಗಳಿಂದ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿ ಸೈ ಎನಿಸಿಕೊಂಡಿದ್ದಾರೆ. ಇಂತಹವೊಂದು ಕೃಷಿ ಸಾಧಕರು ಇದೀಗ ನಮ್ಮ ಸುವರ್ಣನ್ಯೂಸ್  ಮತ್ತು ಕನ್ನಡಪ್ರಭ ಜಂಟಿಯಾಗಿ ನೀಡುತ್ತಿರುವ ಮಹಿಳಾ ಸಾಧಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಆ ಅಜ್ಜಿಗೆ ಬರೋಬ್ಬರಿ 80 ವರ್ಷ, ಅವರು ಓದಲಿಲ್ಲ, ಬರೆಯಲಿಲ್ಲ, ಆದ್ರೆ ತವರುಮನೆಯಿಂದ ಗಂಡನ ಮನೆಗೆ ತಂದ ದೇಶಿಯ ಬೀಜಗಳಿಂದ ಸ್ಪೇಷಲ್​ ಬದನೆಕಾಯಿಗಳನ್ನ ಬೆಳೆಯೋ ಮೂಲಕ ಕೃಷಿಯಲ್ಲಿ ಸಾಧನೆ ಮಾಡಿ ದೇಶದ ರಾಷ್ಟ್ರಪತಿಗಳಿಂದ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿ ಸೈ ಎನಿಸಿಕೊಂಡಿದ್ದಾರೆ. ಇಂತಹವೊಂದು ಕೃಷಿ ಸಾಧಕರು ಇದೀಗ ನಮ್ಮ ಸುವರ್ಣನ್ಯೂಸ್  ಮತ್ತು ಕನ್ನಡಪ್ರಭ ಜಂಟಿಯಾಗಿ ನೀಡುತ್ತಿರುವ ಮಹಿಳಾ ಸಾಧಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ದಿನಾ ಬೆಳಗಾದರೆ ಸಾಕು ಎದ್ದು ದನಕರುಗಳಿಗೆ ನೀರು ಹಾಕೋದು, ಹೊಲಗದ್ದೆಗಳಲ್ಲಿ ಬದನೆಕಾಯಿಗಳ ಬೆಳೆ ನೋಡಿಕೊಳ್ಳೋದು ಮತ್ತು ದೇಶಿಯ ಬೀಜಗಳನ್ನ ಸಂರಕ್ಷಣೆ ಮಾಡೋದು .ಹೌದು. ಇಂತಹದ್ದೊಂದು ಕಾಯಕದಲ್ಲಿ ನಿರತರಾಗಿರೋ ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಲಕ್ಷ್ಮೀಬಾಯಿ ಮಲ್ಲಪ್ಪ ಜುಲ್ಪಿ. ಇವರ ವಯಸ್ಸು ಬರೋಬ್ಬರಿ 80 ವರ್ಷ. ಇವರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳಿದ್ದಾರೆ.  ಇವರಿಗೆ 80 ವರ್ಷ  ವಯಸ್ಸಾಗಿದ್ರೂ ಇವರ ಕಾಯಕ ಮಾತ್ರ ನಿಂತಿಲ್ಲ. ಸದಾ ನೀರಿನ ಚಿಲುಮೆಯಂತಿರೋ ಇವರು ಪಟಪಟನೆ ಕೆಲ್ಸ ಮಾಡೋ ರೀತಿ ಇತರರಿಗೆ ಮಾದರಿಯಾಗಿವಂತಹದ್ದು. ಇತ್ತ ತಮ್ಮ ತವರುಮನೆಯ ಸೋರಗಾಂವಿ ಗ್ರಾಮದಿಂದ  ದೇಶೀಯ ಬದನೆ ತಳಿಗಳನ್ನ ತಂದು ತಮ್ಮ ಗಂಡನ ಮನೆಯಲ್ಲಿ ಬೆಳೆಯುವ ಮೂಲಕ ಅದ್ಭುತ ಸಾಧನೆಯನ್ನ ಮಾಡಿದ್ದಾರೆ. ಕಳೆದ ಹಲವು ವರ್ಷಗಳ ಸಾಧನೆ ಮತ್ತು ಬದನೆ ಸಂಶೋಧನೆಗಾಗಿ ನ್ಯೂ ದೆಹಲಿಯ ನ್ಯಾಷನಲ್​ ಇನೋವೇಷನ್​ ಪೌಂಡೇಶನ್ ವತಿಯಿಂದ ಪ್ರಶಸ್ತಿಗೂ ಭಾಜನರಾಗಿದ್ದು, ದೇಶಿಯ ತಳಿ ಸಂರಕ್ಷಣೆಗಾಗಿ 2015ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರಿಂದ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.

ಇನ್ನು ಲಕ್ಷ್ಮೀಬಾಯಿಯವರು ನಿತ್ಯವೂ ಕೃಷಿ ಕಾರ್ಯದಲ್ಲಿ ತೊಡಗುವಂತವರು. ಓದು ಬರವಣಿಗೆ ಬಾರದೆ ಇದ್ದ ಇವರು ಇಂದಿಗೂ ಹೊಲದಲ್ಲಿ ಬದನೆಕಾಯಿ ಹೆಚ್ಚೋದು, ಬೆಳೆಗೆ ನೀರುಣಿಸೋದು, ಕಸ  ಕೀಳೋದು ಸೇರಿದಂತೆ ಹಲವು ಕಾರ್ಯಗಳಲ್ಲಿ ಬ್ಯೂಸಿಯಾಗಿರ್ತಾರೆ​. ಅಲ್ಲದೆ ಹೊಲದಲ್ಲಿ ಕೆಲ್ಸ ಮಾಡೋರನ್ನ ತಮ್ಮ ಮಕ್ಕಳಂತೆ ನೋಡಿಕೊಳ್ತಾರೆ. ಇನ್ನು ವಿಶೇಷ ಅಂದ್ರೆ ಬೀಜ ಬ್ಯಾಂಕ​ನ್ನು ಮನೆಯಲ್ಲಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಜಾತಿಯ ದೇಶಿಯ ತಳಿಗಳ ಬೀಜಗಳನ್ನ ಮಣ್ಣಿನ ಮಡಿಕೆಗಳಲ್ಲಿಟ್ಟು ಸಂರಕ್ಷಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು ಕೃಷಿ ಸಾಧನೆ ಮಾಡಿರೋ ಕುಟುಂಬದಲ್ಲಿ ಪತಿ ಮಲ್ಲಪ್ಪಗೆ ರಾಜ್ಯ ಪ್ರಶಸ್ತಿ, ಪುತ್ರ ರುದ್ರಪ್ಪಗೆ ಮಹಿಂದ್ರಾ ನ್ಯಾಷನಲ್ ಅವಾರ್ಡ, ಐಎಆರ್ಐ ಪ್ರಶಸ್ತಿಗಳು ಬಂದಿದ್ದು, ಇಡಿ ಕುಟುಂಬ ಕೃಷಿ ಸಾಧಕ ಕುಟುಂಬವಾಗಿ ಹೆಸರುವಾಸಿಯಾಗಿದೆ. ಈಗ ಸುವರ್ಣನ್ಯೂಸ್​ ಮತ್ತು ಕನ್ನಡಪ್ರಭ ಜಂಟಿಯಾಗಿ ಲಕ್ಷ್ಮೀಬಾಯಿ ಅವರಿಗೆ ಮಹಿಳಾ ಸಾಧಕಿ ಪ್ರಶಸ್ತಿ ನೀಡ್ತಿರೋದು ಊರಿಗೆ ಹೆಮ್ಮೆ ತಂದಿದೆ ಅಂತಾರೆ ಊರ ಮುಖಂಡರು.

ಒಟ್ಟಿನಲ್ಲಿ ಸತತ ಪ್ರಯತ್ನದ ಪ್ರತಿಫಲವಾಗಿ ದೇಶಿಯ ಬದನೆ ತಳಿಗಳನ್ನ ರಾಷ್ಟ್ರಮಟ್ಟದಲ್ಲಿ ಪರಿಚಯಿಸಿ ಕನ್ನಡನಾಡಿಗೆ ಹೆಸರು ತಂದಿರೋ ಅಜ್ಜಿ ಲಕ್ಷ್ಮೀಬಾಯಿಯವರ ಕಾರ್ಯ ನಿಜಕ್ಕೂ ಅಭಿಮಾನಪಡುವಂತಹದ್ದಾಗಿದ್ದು, ಅವರೀಗ ಮಹಿಳಾ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
 

click me!