
ನವದೆಹಲಿ[ಡಿ.14]: ವಿವಾದಾತ್ಮಕ ‘ರಫೇಲ್ ಯುದ್ಧವಿಮಾನ ಖರೀದಿ’ಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆಗೆ ಒಳಪಡಿಸಬೇಕು ಎಂಬ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಮಾನ ಪ್ರಕಟಿಸಲಿದೆ. ಒಂದು ವೇಳೆ ನ್ಯಾಯಾಲಯವು ತನಿಖೆಗೆ ಆದೇಶಿಸಿದರೆ ಮೋದಿ ಸರ್ಕಾರಕ್ಕೆ ಮುಜುಗರ ಉಂಟಾಗಲಿದ್ದು, ವಿಪಕ್ಷಗಳಿಗೆ ಬಹುದೊಡ್ಡ ಅಸ್ತ್ರವಾಗುವ ಸಾಧ್ಯತೆ ಇದೆ.
ಮುಖ್ಯ ನ್ಯಾಯಾಧೀಶ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪೀಠ ನವೆಂಬರ್ 14ರಂದು ತೀರ್ಪು ಕಾಯ್ದಿರಿಸಿತ್ತು. ವಕೀಲ ಎಂ.ಎಲ್. ಶರ್ಮಾ ಎಂಬುವವರು ಈ ಪ್ರಕರಣದ ಮೊದಲ ಅರ್ಜಿದಾರಾಗಿದ್ದರು. ನಂತರ ವಿನೀತ್ ದಂಡಾ ಎಂಬ ಇನ್ನೊಬ್ಬ ವಕೀಲರು ನ್ಯಾಯಾಲಯದ ಉಸ್ತುವಾರಿಯ ತನಿಖೆ ನಡೆಯಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆಪ್ ಮುಖಂಡ ಸಂಜಯ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ, ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಕೂಡ ಅರ್ಜಿ ಸಲ್ಲಿಸಿ, ಸಿಬಿಐಗೆ ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಕೋರ್ಟ್ ಆದೇಶಿಸಬೇಕು ಎಂದು ಕೋರಿದ್ದರು.
ಈ ಎಲ್ಲ ಅರ್ಜಿಗಳನ್ನು ಒಗ್ಗೂಡಿಸಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.
ಸಮರ್ಥಿಸಿದ್ದ ಕೇಂದ್ರ:
ಫ್ರಾನ್ಸ್‌ನ ಡಸಾಲ್ಟ್ ಕಂಪನಿ ಜತೆಗಿನ 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ನಿಯಮಾನುಸಾರ ನಡೆದಿದೆ ಎಂದು ವಾದಿಸಿದ್ದ ಕೇಂದ್ರ ಸರ್ಕಾರ, ಖರೀದಿ ಮೊತ್ತವನ್ನು ಬಹಿರಂಗಪಡಿಸಲು ಮಾತ್ರ ನಿರಾಕರಿಸಿತ್ತು. ಒಪ್ಪಂದದಲ್ಲಿ ‘ಬೆಲೆಯನ್ನು ಬಹಿರಂಗಪಡಿಸುವುದಿಲ್ಲ’ ಎಂಬ ಷರತ್ತು ವಿಧಿಸಲಾಗಿದೆ ಎಂದು ಅದು ಕಾರಣ ನೀಡಿತ್ತು.
ಹೀಗಾಗಿ ಸದ್ಯದ ಮಟ್ಟಿಗೆ ಬೆಲೆ ಹೊರತುಪಡಿಸಿದರೆ ಮಿಕ್ಕ ಎಲ್ಲ ಖರೀದಿ ಪ್ರಕ್ರಿಯೆಯ ಬಗ್ಗೆ ಮಾತ್ರ ತಾನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು.
ಆದರೆ ಅಂದಾಜು 58 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದ ಇದಾಗಿದೆ ಎಂದು ಹೇಳಲಾಗಿದೆ. ನಿಯಮ ಗಾಳಿಗೆ ತೂರಿ, ರಕ್ಷಣಾ ಸಲಕರಣೆಗಳ ಉತ್ಪಾದನೆಯ ಗಂಧ ಗಾಳಿ ಗೊತ್ತಿರದ ಅನಿಲ್ ಅಂಬಾನಿಯವರ ಕಂಪನಿಯನ್ನು ಡಸಾಲ್ಟ್ ಕಂಪನಿಯು ತನ್ನ ಪಾಲುದಾರನನ್ನಾಗಿ ಮಾಡಿಕೊಂಡಿದೆ. ಅಂಬಾನಿ ಕಂಪನಿ ಆಯ್ಕೆಯ ಹಿಂದೆ ಮೋದಿ ಸರ್ಕಾರದ ಪ್ರಭಾವವಿದೆ ಎಂಬುದ ಪ್ರತಿಪಕ್ಷಗಳ ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ