ಕರ್ನಾಟಕದ 'ನಿರ್ಣಯ'ಕ್ಕೆ ಕಿವಿಗೊಡದ ಸುಪ್ರೀಂಕೋರ್ಟ್: ತಮಿಳುನಾಡಿಗೆ ಮತ್ತೆ ಕೋರ್ಟ್ ಮಣೆ

By Internet DeskFirst Published Sep 27, 2016, 4:42 AM IST
Highlights

ನವದೆಹಲಿ(ಸೆ. 27): ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ. ನ್ಯಾಯಪೀಠದ ಆದೇಶವನ್ನು ಪಾಲಿಸದೆ ಸುಪ್ರೀಂಕೋರ್ಟ್'ಗೆ ಅವಿಧೇಯತೆ ತೋರಿದ್ದೀರೆಂದು ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಪೀಠದ ಮಧ್ಯಂತರ ಆದೇಶದ ಮಾರ್ಪಾಡು ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮೂರು ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ ಅಂದರೆ ಒಟ್ಟಾರೆ 18 ಸಾವಿರ ಕ್ಯೂಸೆಕ್ ನೀರನ್ನು ಬಿಡಿ ಎಂದು ಆದೇಶ ನೀಡಿದೆ. ಜೊತೆಗೆ, ವಿಚಾರಣೆಯನ್ನು ಎರಡು ದಿನ ಮುಂದೂಡಿತು.

ಇದೇ ವೇಳೆ, ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ತೆಗೆದುಕೊಂಡಿದ್ದ 'ನಿರ್ಣಯ'ವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಯಾವ ಕಾನೂನಿನಡಿ ನಿರ್ಣಯ ಕೈಗೊಂಡಿರಿ? ನೀವು ತೆಗೆದುಕೊಂಡಿದ್ದ ನಿರ್ಣಯಕ್ಕೂ ಸುಪ್ರೀಂಕೋರ್ಟ್'ನ ಆದೇಶ ಪಾಲನೆಗೂ ಸಂಬಂಧವಿಲ್ಲ. ನೀವು ಮೊದಲು ನೀರು ಬಿಟ್ಟು ನ್ಯಾಯಾಲಯದ ಘನತೆ ಎತ್ತಿಹಿಡಿಯಿರಿ ಎಂದು ನ್ಯಾಯಪೀಠವು ಖಾರವಾಗಿ ತಿಳಿಸಿದೆ.

ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕವೂ ಕರ್ನಾಟಕದ ವಕೀಲ ಫಾಲಿ ಎಸ್.ನಾರಿಮನ್ ಅವರು ತಮ್ಮ ವಾದ ಮುಂದುವರಿಸಲು ಯತ್ನಿಸಿದರು. ತಮ್ಮ ರಾಜ್ಯ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲದಂಥ ಸ್ಥಿತಿ ಇದೆ ಎಂದು ಕೋರ್ಟ್'ಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೆ, ಯಾವುದೇ ಉಪಯೋಗವಾಗಲಿಲ್ಲ.

ತಮಿಳುನಾಡು ಜಾಣತನದ ವಾದ:
ಕರ್ನಾಟದ ಕಾವೇರಿ ಜಲಾಶಯಗಳಲ್ಲಿರುವ ನೀರು ಕುಡಿಯೋದಕ್ಕೆಷ್ಟೇ ಇದೆ. ಕುಡಿಯಲಷ್ಟೇ ಉಪಯೋಗಿಸುತ್ತೇವೆ ಎಂದು ಕರ್ನಾಟಕ 'ನಿರ್ಣಯ' ಕೈಗೊಂಡಿತ್ತು. ಆದರೆ, ತಮಿಳುನಾಡು ಇಂಥದ್ದೇ ವಾದವನ್ನು ಸುಪ್ರೀಂಕೋರ್ಟ್ ಮುಂದಿಟ್ಟು ಕರ್ನಾಟಕಕ್ಕೆ ಪಟ್ಟಿಹಾಕಿತು. ತಮಿಳುನಾಡಿಗೆ ಕುಡಿಯಲೇ ನೀರು ಬೇಕು. ನಮಗೆ ಕುಡಿಯಲು ನೀರು ಕೊಡಿಸಿ ಎಂದು ಸುಪ್ರೀಂಕೋರ್ಟ್'ನಲ್ಲಿ ತಮಿಳುನಾಡು ವಾದ ಮಂಡಿಸಿತು. ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ಈ ವಾದಕ್ಕೆ ತಲೆದೂಗಿದಂತಿದೆ.

click me!