ನೋಟು ರದ್ಧತಿಯಿಂದ ಜನರು ದಂಗೆ ಏಳುವ ಪರಿಸ್ಥಿತಿ ಇದೆ: ಸುಪ್ರೀಂಕೋರ್ಟ್ ಆತಂಕ

By Suvarna Web DeskFirst Published Nov 18, 2016, 11:35 AM IST
Highlights

"ಇದು ನಿಜಕ್ಕೂ ಗಂಭೀರವಾದುದು. ಇದು ಪರಿಗಣಿಸಲೇಬೇಕಾಗುವಂಥದ್ದು. ಜನರು ತೊಂದರೆಯಾಗಿದೆ. ಅವರು ಹತಾಶರಾಗಿದ್ದಾರೆ. ಗಲಭೆಯಾದರೂ ಆಗಬಹುದು"

ನವದೆಹಲಿ(ನ. 18): ಕಪ್ಪುಹಣ ನಿಗ್ರಹಿಸುವ ದೃಷ್ಟಿಯಿಂದ ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಸರಕಾರದ ನಿರ್ಧಾರದಿಂದ ಜನಸಾಮಾನ್ಯರಿಗೆ ತೀರಾ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನೋಟು ನಿಷೇಧದ ಕ್ರಮವನ್ನು ಪ್ರಶ್ನಿಸಿ ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ದೂರುಗಳಿಗೆ ತಡೆ ನೀಡಬೇಕೆಂದು ಸರಕಾರ ಮಾಡಿಕೊಂಡ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. "ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ಸಂಕಷ್ಟ ಎರಗಿರುವಾಗ, ಅವರ ಕೂಗಿಗೆ ನಾವು ಬಾಗಿಲು ಹಾಕಲು ಆಗುತ್ತಾ?" ಎಂದು ನ್ಯಾಯಾಲಯ ಪ್ರಶ್ನಿಸಿದೆ.

"ಇದು ನಿಜಕ್ಕೂ ಗಂಭೀರವಾದುದು. ಇದು ಪರಿಗಣಿಸಲೇಬೇಕಾಗುವಂಥದ್ದು. ಜನರು ತೊಂದರೆಯಾಗಿದೆ. ಅವರು ಹತಾಶರಾಗಿದ್ದಾರೆ. ಗಲಭೆಯಾದರೂ ಆಗಬಹುದು" ಎಂದು ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಮತ್ತು ನ್ಯಾ| ಅನಿಲ್ ಆರ್.ದಾವೆ ಅವರಿರುವ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಆದರೆ, ನ್ಯಾಯಾಲಯದ ಮಾತನ್ನು ಅಟಾರ್ನಿ ಜನರಲ್ ಮುಕುಲ್ ರೋಹತಗಿ ಒಪ್ಪಿಕೊಳ್ಳಲಿಲ್ಲ. "ದಂಗೆ ಏಳುವ ಸ್ಥಿತಿ ಇದೆ ಎನ್ನುವುದು ಸುಳ್ಳು. ಜನರು ಬಹಳ ಸಂಯಮದಿಂದ ಕ್ಯೂನಲ್ಲಿ ನಿಂತುಕೊಳ್ಳುತ್ತಿದ್ದಾರೆ.. ನಮಗೆ ಜನರ ಬಗ್ಗೆ ಕಾಳಜಿ ಇಲ್ಲದೇ ಹೋಗಿದ್ದರೆ ಪ್ರತಿದಿನವೂ, ಪ್ರತಿ ಗಂಟೆಯೂ ನೋಟಿಫಿಕೇಶನ್ ನೀಡುವ ಪ್ರಮೇಯಕ್ಕೆ ಹೋಗುತ್ತಲೇ ಇರಲಿಲ್ಲ," ಎಂದು ಅಟಾರ್ನಿ ಜನರಲ್ ವಾದಿಸಿದ್ದಾರೆ.

ಸರಕಾರದ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. "ಜನರಿಗೆ ಸಂಕಷ್ಟವಾಗಿರುವುದು ನಿಜ. ನೀವದನ್ನ ತಳ್ಳಿಹಾಕಲು ಸಾಧ್ಯವಿಲ್ಲ..." ಎಂದು ಸುಪ್ರೀಂಕೋರ್ಟ್ ಹೇಳಿತು.

ಇದೇ ವೇಳೆ, ಕಾಂಗ್ರೆಸ್ ಮುಖಂಡ ಹಾಗೂ ಹಿರಿಯ ವಕೀಲ ಕಪಿಲ್ ಸಿಬಾಲ್ ಅವರು ನೋಟ್ ಬ್ಯಾನ್ ಕ್ರಮದಿಂದಾಗಿ ನೂಕುನುಗ್ಗಲಿಗೆ ಸಿಕ್ಕು ದೇಶಾದ್ಯಂತ 47 ಜನರು ಸಾವನ್ನಪ್ಪಿದ್ದಾರೆಂಬ ಮಾಹಿತಿಯುಳ್ಳ ಅಫಿಡವಿಟನ್ನು ಕೋರ್ಟ್'ಗೆ ಸಲ್ಲಿಕೆ ಮಾಡಿದರು. "ಸದ್ಯ 9 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ಮಾತ್ರ ಚಾಲನೆಯಲ್ಲಿದೆ. ಇನ್ನೂ 23 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಮುದ್ರಿಸಬೇಕಾದ ಸ್ಥಿತಿ ಇದೆ" ಎಂದು ಕಪಿಲ್ ಸಿಬಲ್ ವಾದಿಸಿದ್ದಾರೆ.

click me!