ಮಾವಿನ ಬೆಳೆಗಾರರಿಗೆ ಬಂಪರ್ ಪ್ರಕಟಿಸಿದ ರಾಜ್ಯ ಸರ್ಕಾರ

First Published Jul 10, 2018, 9:21 AM IST
Highlights
  • ಪ್ರತಿ ಕಿಲೋ ಮಾವಿಗೆ 2.50 ರು. ಬೆಂಬಲ ಬೆಲೆ ಘೋಷಿಸಿದ ಸರ್ಕಾರ
  • ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾವು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ 

ಬೆಂಗಳೂರು[ಜು.10]: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾವು ಬೆಳೆಗೆ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದೆ.

ನಿಫಾ ವೈರಸ್ ಭೀತಿಯಿಂದ ಮಾವು ಬೆಳೆಗೆ ಬೇಡಿಕೆ ಕುಸಿದು ರೈತರು ಕಂಗಾಲಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಟನ್ ಮಾವಿಗೆ 2500 ರು. ಬೆಂಬಲ ಬೆಲೆಯನ್ನು ವಿಧಾನಮಂಡಲದಲ್ಲಿ ಸೋಮವಾರ ಪ್ರಕಟಿಸಿದೆ.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾವು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು, ಪ್ರತಿ ಕಿಲೋ ಮಾವಿಗೆ 2.50 ರು. ಬೆಂಬಲ ಬೆಲೆ ಘೋಷಿಸಿ ಮಾವು ಖರೀದಿಗೆ ತೀರ್ಮಾನಿಸಿದೆ. ಸೋಮವಾರ ವಿಧಾನಸಭೆಯಲ್ಲಿ ಕೃಷಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಈ ಬಗ್ಗೆ ಘೋಷಣೆ ಮಾಡಿದರು.

ಈ ವೇಳೆ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಈ ಮೊದಲು ಹೆಚ್ಚಾಗಿ ರೈತರು ಪಕ್ಕದ ಆಂಧ್ರಪ್ರದೇಶದಲ್ಲಿರುವ ಮಾವು ಸಂಸ್ಕ ರಣಾ ಘಟಕಕ್ಕೆ ಮಾವು ಬೆಳೆಯನ್ನು ಮಾರಾಟ ಮಾಡುತ್ತಿದ್ದರು. ಆದರೆ, ಈಗ ಅಲ್ಲಿಯೂ ಬೆಳೆ ಹೆಚ್ಚಾಗಿ ಮಾವನ್ನು ಆಮದು ಮಾಡಿಕೊಳ್ಳದಿರಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದೆ. ಪರಿಣಾಮ ಮಾವು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ, ರೈತರ  ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಮಾವು ಬೆಳೆಗಾರರ ಸಂಕಷ್ಟವನ್ನು ಸರ್ಕಾರವು ಗಮನಿಸಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾವಿನ ಬೆಂಬಲ ಬೆಲೆ ಘೋಷಿಸಿದೆ. ಮಾವು ಖರೀದಿಗೆ 15ರಿಂದ 20 ಕೋಟಿ ರು. ಹೊರೆಯಾಗಬಹುದು. ಆದರೂ, ಯೋಚನೆ ಮಾಡದೆ ಬೆಳೆಗಾರರ ನೆರವಿಗೆ ಸ್ಪಂದಿಸುವ ನಿರ್ಧಾರ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದ ಮಾವು ಸಂಸ್ಕರಣಾ ಘಟಕಗಳಿರುವ ಕಾರಣ ಮಹಾರಾಷ್ಟ್ರ ಸರ್ಕಾರವನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

click me!