ಕರ್ಣನಂತೆ ನಾನು ಸಾಂದರ್ಭಿಕ ಶಿಶು

First Published Jul 10, 2018, 9:05 AM IST
Highlights
  • ಹಿಂದೆ 2006ರಲ್ಲಿ ಜೆಡಿಎಸ್‌ನ 38 ಶಾಸಕರೊಂದಿಗೆ ಹೊರಬಂದಾಗ ಬಿಜೆಪಿ ನನ್ನನ್ನು ಸಿಎಂ ಮಾಡಿತ್ತು
  • ಎಂ.ಪಿ.ಪ್ರಕಾಶ್ ಅವರನ್ನು ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿದ್ದೆ. ಆದರೆ ಬಿಜೆಪಿ ಒಪ್ಪರಲಿಲ್ಲ ಎಂದ ಸಿಎಂ

ಬೆಂಗಳೂರು[ಜು.10]: ಒಂದು ರೀತಿಯಲ್ಲಿ ನನ್ನ ಪರಿಸ್ಥಿತಿ ಮಹಾ ಭಾರತದ ಕರ್ಣನಂತೆ. ಆತನೂ ಒಬ್ಬ ಸಾಂದರ್ಭಿಕ ಶಿಶು ಎಂದು ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ರಾಜ್ಯಪಾಲರ ಭಾಷಣದ ವಂದನಾರ್ಪಣೆ ಪ್ರಸ್ತಾವದ ಮೇಲಿನ ಚರ್ಚೆ ಉತ್ತರ ನೀಡಿದ ಅವರು ರಾಜ್ಯಪಾಲರ ಭಾಷಣದಲ್ಲಿನ ಅಂಶಗಳಿಗಿಂತ ಹೆಚ್ಚಾಗಿ ರಾಜಕೀಯ ಅನಿವಾರ್ಯತೆ ಬಗ್ಗೆಯೇ ಮಾತನಾಡಿದರು.

ನಮ್ಮದು 37 ಶಾಸಕರ ಸರ್ಕಾರ ಎಂಬುದಾಗಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಟೀಕೆ ಮಾಡಿದ್ದಾರೆ. ಅದು ತಪ್ಪು. ನಮ್ಮದು 120 ಶಾಸಕರ ಸರ್ಕಾರ. ಹಿಂದೆ 2006ರಲ್ಲಿ
ಜೆಡಿಎಸ್‌ನ 38 ಶಾಸಕರೊಂದಿಗೆ ಹೊರಬಂದಾಗ ಬಿಜೆಪಿ ಮತ್ತು ಜೆಡಿಯುನ 84 ಶಾಸಕರು ನನ್ನನ್ನು ಸಿಎಂ ಮಾಡಿದರು.

ಆಗ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲವೇ? ಆಗ ನೀವು ಯಾಕೆ ಬೆಂಬಲಿಸಿದಿರಿ ಎಂಬುದನ್ನು ಮರೆತಿದ್ದೀರಿ. ನಾನೇನು ನಿಮ್ಮ ಬಳಿ ಸಿಎಂ ಆಗಲು ಬಂದಿ
ರಲಿಲ್ಲ ಎಂದು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೇಳಿದರು. ನಾನು ಸಾಂದರ್ಭಿಕ ಶಿಶು ಎಂದಿದ್ದನ್ನು ಬಿಜೆಪಿ ನಾಯಕರು ಲೇವಡಿ ಮಾಡುತ್ತಿದ್ದಾರೆ. ರಾಮಾಯಣ ಮತ್ತು ಮಹಾ ಭಾರತಗಳು ಇಂದಿಗೂ ಪ್ರಸ್ತುತ. ಕರ್ಣನ ಪಾತ್ರವೇನು? ಆತನೂ ಒಬ್ಬ ಸಾಂದರ್ಭಿಕ ಶಿಶು. ಆತ ಪಟ್ಟ ನೋವು, ಯಾತನೆ ಗೊತ್ತಿದೆ. ಆ ತಾಯಿ ಋಷಿ ಕೊಟ್ಟ ವರವನ್ನು ಪರೀಕ್ಷಿಸಲು ಹೋಗಿ ಕರ್ಣನನ್ನು ಪಡೆದಿದ್ದಳು. ಈಗ ನನ್ನ ಪರಿಸ್ಥಿತಿಯೂ ಕರ್ಣನಂತಾಗಿದೆ ಎಂದರು. 

ಹಿಂದೆ 2006ರಲ್ಲಿ ಬಿಜೆಪಿ ನಾಯಕರು ನನ್ನ ಮನೆಗೆ ಬಂದಿದ್ದರು. ಆಗ ನಾನು ನಮ್ಮ ಪಕ್ಷದ ಎಂ.ಪಿ.ಪ್ರಕಾಶ್ ಅವರನ್ನು ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿದ್ದೆ. ಆದರೆ, ಒಪ್ಪಲಿಲ್ಲ. ಕೊನೆಗೆ ನಾನೇ ಮುಖ್ಯ ಮಂತ್ರಿಯಾಗಬೇಕಾಯಿತು. ಮುಂದೆ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. 150 ಕೋಟಿ ರು.ಗಳ ಗಣಿ ಲಂಚ ಆರೋಪವನ್ನೂ ಎದುರಿಸಬೇಕಾಯಿತು ಎಂದು ವಿವರಿಸಿದರು.

ಟೇಕ್ ಆಫ್ ಪದ ಗುತ್ತಿಗೆ ಪಡೆದಿದ್ದಾರೆಯೇ?
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಈಗಷ್ಟೇ ಒಂದೂವರೆ ತಿಂಗಳಾಗಿದೆ. ಆಗಲೇ ಈ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ ಎಂಬ ಟೀಕೆಗಳನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶದಿಂದ ಹೇಳಿದರು.

ಪದೇ ಪದೇ ಟೇಕ್ ಆಫ್ ಆಗಿಲ್ಲ ಎನ್ನುತ್ತಿದ್ದಾರೆ. ಈ ಟೇಕ್ ಆಫ್ ಪದವನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ. ಒಂದೂವರೆ ತಿಂಗಳಷ್ಟೇ ಆಗಿದೆ. ಆಗಲೇ ಏನೋ ಆಗಿದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಜನ ನಮ್ಮ ಪ್ರಣಾಳಿಕೆ ತಿರಸ್ಕರಿಸಿದ್ದಾರೆ: 
ಜನರು ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಬೇಸರದಿಂದ ಹೇಳಿದರು. ನಮ್ಮ ಪಕ್ಷ ಸ್ವಂತ ಬಲದ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಗಳಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದೆ. ಅದನ್ನು ಪ್ರಣಾಳಿಕೆ ಯಲ್ಲೂ ಪ್ರಸ್ತಾಪಿಸಿದ್ದೆವು. ಆದರೆ, ಸ್ವತಂತ್ರ ಸರ್ಕಾರದ ಬಲ ಕೊಡಿ ಎಂಬ ಮನವಿಯನ್ನೂ ಮಾಡಿದ್ದೆ. ಸ್ವತಂತ್ರ ಸರ್ಕಾರ ಮಾಡುವಷ್ಟು ಸಂಖ್ಯಾಬಲ ಬರಲಿಲ್ಲ. ಕಾಂಗ್ರೆಸ್ ಬೆಂಬಲ ದಿಂದ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ನನ್ನದೇ ಆದ ಇತಿಮಿತಿಗಳಿವೆ ಎಂದರು. ನಮ್ಮ ಪಕ್ಷದ ಪ್ರಣಾಳಿಕೆಯನ್ನು ಜನರು ತಿರಸ್ಕರಿಸಿದ್ದಾರೆ. ನನ್ನ ಪ್ರಣಾಳಿಕೆ ಮೇಲೆ ಭರವಸೆ ಇಟ್ಟಿದ್ದರೆ 38 ಅಲ್ಲ 113 ಶಾಸಕರು ಚುನಾಯಿತರಾಗುತ್ತಿದ್ದರು ಎಂದರು.

click me!