ಸುದೀರ್ಘ ಬಾಹ್ಯಾಕಾಶ ಯಾತ್ರೆಯ ಬಳಿಕ ಸುನೀತಾ ವಿಲಿಯಮ್ಸ್ ಮನೆಗೆ ಮರಳಿದ್ದು, ತಮ್ಮ ನಾಯಿಗಳನ್ನು ಕಂಡು ಸಂಭ್ರಮಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ್ಯೂಯಾರ್ಕ್(ಏ.2): ಕೇವಲ 8 ದಿನಗಳ ಪ್ರಯಾಣಕ್ಕಾಗಿ ಬಾಹ್ಯಾಕಾಶಕ್ಕಾಗಿ ಪ್ರಯಾಣ ಬೆಳೆಸಿದ್ದ ಸುನೀತಾ ವಿಲಿಯಮ್ಸ್, ತಾಂತ್ರಿಕ ಕಾರಣಗಳಿಂದಾಗಿ ಅಂದಾಜು 280ಕ್ಕೂ ಅಧಿಕ ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಉಳಿದುಕೊಳ್ಳುವಂತಾಗಿತ್ತು. ಕಳೆದ ಮಾರ್ಚ್ ಮಧ್ಯಭಾಗದಲ್ಲಿ ನಾಸಾ, ಎಲೋನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್ ಸಂಸ್ಥಯ ಸಹಯೋಗದಿಂದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ಯಶಸ್ವಿಯಾಗಿ ವಾಪಾಸಾಗಿದ್ದರು.
ಅಲ್ಲಿಂದಲೂ ನಾಸಾ ಮೇಲ್ವಿಚಾರಣೆಯಲ್ಲಿದ್ದ ಸುನೀತಾ ವಿಲಿಯಮ್ಸ್ ಈಗ ಮೇಲ್ವಿಚಾರಣೆಯನ್ನೂ ಮುಗಿಸಿ ಸಂಪೂರ್ಣವಾಗಿ ಮುಕ್ತವಾಗಿದ್ದಾರೆ. ಇದರ ಬೆನ್ನಲ್ಲಿಯೇ ತಮ್ಮ ಎಕ್ಸ್ ಪೇಜ್‌ನಲ್ಲಿ ಮೊದಲ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬೂದಿ ಬಣ್ಣದ ಹೂಡಿ ಧರಿಸಿರುವ ಸುನೀತಾ ವಿಲಿಯಮ್ಸ್ ತಮ್ಮ ಮನೆಯ ಬಾಗಿಲು ತೆಗೆದು ಹೊರಬರುತ್ತಿದ್ದಂತೆ ಎರಡೂ ನಾಯಿಗಳು ಅವರನ್ನು ಬಂದು ಸುತ್ತಿವರಿಯುತ್ತದೆ. ಸಂಭ್ರಮದಿಂದ ಕುಣಿಯುವ ನಾಯಿಯ ಬೆನ್ನ ಮೇಲೆ ಕೈಇರಿಸಿ, ಅವುಗಳನ್ನು ಸವರಿಸುತ್ತಾ ಸುನೀತಾ ವಿಲಿಯಮ್ಸ್ ಸಂಭ್ರಮಿಸಿದ್ದಾರೆ. ಇನ್ನು ನಾಯಿಗಳು ಕೂಡ ಸುನೀತಾ ವಿಲಿಯಮ್ಸ್‌ರನ್ನು ಕಂಡು ಖುಷಿಯಾಗಿ ಆಟವಾಡಲು ಆರಂಭಿಸುತ್ತವೆ. ಅವುಗಳ ಆಟವನ್ನು ನೋಡಿ ಕೊನೆಗೇ ಸ್ವತಃ ಸುನೀತಾ ವಿಲಿಯಮ್ಸ್ ದಾರಿಯಲ್ಲೇ ಕುಳಿತು ಅವುಗಳನ್ನು ಮುದ್ದಿಸಿದ್ದಾರೆ.
ಈ ವಿಡಿಯೋಗೆ ಬೆಸ್ಟ್ ಹೋಮ್‌ಕಮಿಂಗ್ ಎವರ್ ಅಂದರೆ ನಾನು ಮನೆಗೆ ವಾಪಾಸಾದ ಬೆಸ್ಟ್ ಕ್ಷಣ ಎಂದು ಅವರು ಬರೆದುಕೊಂಡಿದ್ದಾರೆ. ಇದಕ್ಕೆ ಎಲೋನ್ ಮಸ್ಕ್ ಕೂಡ ಹಾರ್ಟ್ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವನ್ನು ನೋಡಿದ್ದು ಅತ್ಯಂತ ಹೃದಯಸ್ಪರ್ಶಿ ಕ್ಷಣ. ಎಷ್ಟು ಮುದ್ದಾಗಿದೆ ವಿಡಿಯೋ ಎಂದು ಬರೆದುಕೊಂಡಿದ್ದಾರೆ.
ಲ್ಯಾಬ್ರಡಾರ್ ತಳಿಯ ಎರಡು ನಾಯಿಗಳಿಗೆ ಸುನೀತಾ ವಿಲಿಯಮ್ಸ್ ಗನ್ನರ್ ಮತ್ತು ಗೋರ್ಬಿ ಎಂದು ಹೆಸರಿಟ್ಟಿದ್ದಾರೆ. ಇದನ್ನು ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂಬತ್ತು ತಿಂಗಳ ಸುದೀರ್ಘ ಬಾಹ್ಯಾಕಾಶ ಯಾತ್ರಯ ಬಳಿಕ ಮಾರ್ಚ್ 18 ರಂದು ವಿಲಿಯಮ್ಸ್ ಭೂಮಿಗೆ ಮರಳಿದ್ದರು. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷಗಳಿಂದಾಗಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದರಿಂದ, ಎಂಟು ದಿನಗಳ ಸಂಕ್ಷಿಪ್ತ ಕಾರ್ಯಾಚರಣೆ 9 ದಿನಗಳ ದೀರ್ಘ ಯಾತ್ರೆಯಾಗಿ ಬದಲಾಗಿತ್ತು.
ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತೆ? ಸುನಿತಾ ವಿಲಿಯಮ್ಸ್ ಉತ್ತರ
ಬಾಹ್ಯಾಕಾಶದಲ್ಲಿದ್ದಾಗಲೂ ತಮ್ಮ ಪತಿ ಹಾಗೂ ನಾಯಿಗಳನ್ನು ನೋಡಲು ಕಾತರದಿಂದ ಇದ್ದೇನೆ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು. ನನ್ನ ನಾಯಿಗಳ ಜೊತೆ ಬೆಳಗಿನ ವಾಕಿಂಗ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ನೆನಪಿಸಿಕೊಂಡಿದ್ದರು.
ಭೂಮಿಗೆ ಮರಳಿದ ನಂತರ ಸುನಿತಾ, ಬುಚ್ ಮೊದಲ ಸುದ್ದಿಗೋಷ್ಠಿ: ಹಲವು ಪ್ರಶ್ನೆಗಳಿಗೆ ಉತ್ತರ