ಬರ್ತ್’ಡೇಗೆ ಕಳಿಸಿಲ್ಲವೆಂದು ವಿದ್ಯಾರ್ಥಿನಿ ಸೂಸೈಡ್

By Suvarna Web DeskFirst Published Mar 17, 2018, 10:15 AM IST
Highlights

ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಕಳುಹಿಸದೇ ಇರುವುದಕ್ಕೆ ತಾಯಿ ಮೇಲೆ ಕೋಪಗೊಂಡು ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಬೆಂಗಳೂರು : ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಕಳುಹಿಸದೇ ಇರುವುದಕ್ಕೆ ತಾಯಿ ಮೇಲೆ ಕೋಪಗೊಂಡು ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಕೆಂಪೇಗೌಡ ನಗರದ ನಂಜಪ್ಪ ಬ್ಲಾಕ್ ನಿವಾಸಿ ಚಂದ್ರಶೇಖರ್ ಮತ್ತು ಚಂದ್ರಿಕಾ ದಂಪತಿಯ ಪುತ್ರಿ ಅರ್ಪಿತಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಅರ್ಪಿತಾ ತಂದೆ ಚಂದ್ರಶೇಖರ್ ಕ್ಯಾಬ್ ಚಾಲಕರಾಗಿದ್ದು, ಅವರ ಕುಟುಂಬ ಕೆಂಪೇಗೌಡ ನಗರದ ನಂಜಪ್ಪ ಬ್ಲಾಕ್‌ನಲ್ಲಿ ವಾಸವಿತ್ತು. ದಂಪತಿಗೆ ಅರ್ಪಿತಾ ಒಬ್ಬಳೇ ಮಗಳಾಗಿದ್ದಳು. ಅರ್ಪಿತಾ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಾಣಿಜ್ಯ ವಿಭಾಗ) ವ್ಯಾಸಂಗ ಮಾಡುತ್ತಿದ್ದಳು.

ಗುರುವಾರ ಅರ್ಪಿತಾಳ ಸ್ನೇಹಿತೆಯ ಹುಟ್ಟಹಬ್ಬದ ಸಂಭ್ರಮಾಚರಣೆ ಇತ್ತು. ಬರ್ತ್‌ಡೇ ಪಾರ್ಟಿಗೆ ಸ್ನೇಹಿತೆ ಆಹ್ವಾನಿಸಿದ್ದರಿಂದ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅರ್ಪಿತಾ ಪಾರ್ಟಿಗೆ ಹೋಗುವ ಸಂಬಂಧ ತಾಯಿ ಚಂದ್ರಿಕಾ ಬಳಿ ಅನುಮತಿ ಕೇಳಿದ್ದಳು.

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ಚಂದ್ರಿಕಾ, ಬರ್ತ್‌ಡೇ ಪಾರ್ಟಿಗೆ ಹೋಗುವುದು ಬೇಡ ಎಂದು ಪುತ್ರಿಗೆ ಹೇಳಿದ್ದರು. ಓದಿನ ಕಡೆ ಗಮನ ಹರಿಸುವಂತೆ ಸೂಚಿಸಿದ್ದರು. ಇಷ್ಟಕ್ಕೆ ಕೋಪಗೊಂಡ ಅರ್ಪಿತಾ ತಾಯಿ ಬಳಿ ಜಗಳ ಮಾಡಿಕೊಂಡು ಮೊದಲ ಮಹಡಿಯಲ್ಲಿರುವ ತನ್ನ ಕೊಠಡಿಗೆ ಹೋಗಿದ್ದಳು. ಮಗಳು ಕೋಪದಲ್ಲಿ ಹೋಗಿದ್ದಾಳೆ ಎಂದುಕೊಂಡು ತಾಯಿಕೂಡ ಸುಮ್ಮನಾಗಿದ್ದರು.

ಸಂಜೆ ಏಳು ಗಂಟೆಯಾದರೂ ಅರ್ಪಿತಾ ಕೆಳ ಮಹಡಿಗೆ ಬಂದಿರಲಿಲ್ಲ. ಅನುಮಾನಗೊಂಡು ಚಂದ್ರಿಕಾ ಅವರು ಆಕೆಯ ಕೊಠಡಿಗೆ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕುಣಿಕೆಯಿಂದ ಇಳಿಸಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕೊಂಡಯ್ಯಲಾಗಿದ್ದು, ವೈದ್ಯರು ಪುತ್ರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಅರ್ಪಿತಾ ಯಾವುದೇ ಡೆತ್‌ನೋಟ್ ಬರೆದಿಟ್ಟಿಲ್ಲ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

click me!