ಮೇಲ್ಮನೆಯ ಆರು ಸ್ಥಾನಗಳಿಗೆ ಬಿಜೆಪಿಯಲ್ಲಿ ಈಗಲೇ ತೀವ್ರ ಲಾಬಿ

Published : Oct 21, 2017, 02:31 PM ISTUpdated : Apr 11, 2018, 12:54 PM IST
ಮೇಲ್ಮನೆಯ ಆರು ಸ್ಥಾನಗಳಿಗೆ ಬಿಜೆಪಿಯಲ್ಲಿ ಈಗಲೇ ತೀವ್ರ ಲಾಬಿ

ಸಾರಾಂಶ

ಟಿಕೆಟ್‌ಗೆ ಪೈಪೋಟಿ ಇನ್ನು 6 ತಿಂಗಳಲ್ಲಿ ತೆರವಾಗಲಿರುವ 6 ಸ್ಥಾನಗಳು | ಈಗಲೇ ಆಯ್ಕೆ ಪ್ರಕ್ರಿಯೆ ಆರಂಭ: ಪೈಪೋಟಿ ತೀವ್ರ | ಸ್ಪರ್ಧೆಯಿಂದ ಶಂಕರಮೂರ್ತಿ, ರಾಮಚಂದ್ರಗೌಡ ಹಿಂದಕ್ಕೆ: ಮಕ್ಕಳಿಗೆ ಟಿಕೆಟ್‌ಗೆ ಬೇಡಿಕೆ

ಬೆಂಗಳೂರು:  ಮುಂದಿನ ಜೂನ್ ಒಳಗಡೆ ನಡೆಯಬೇಕಿರುವ ವಿಧಾನ ಪರಿಷತ್ತಿನ ಆರು ಕ್ಷೇತ್ರಗಳ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆಗೆ ಪ್ರಕ್ರಿಯೆ ಆರಂಭಗೊಂಡಿದ್ದು, ಆಕಾಂಕ್ಷಿಗಳ ಪೈಪೋಟಿಯೂ ತೀವ್ರವಾಗಿದೆ.

ನೈಋತ್ಯ ಪದವೀಧರರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರಗಳ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಸಿದ್ಧತೆಗಳಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿಯಿಂದ ಹಿರಿಯ ಮುಖಂಡರನ್ನು ಒಳಗೊಂಡ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.

ಒಟ್ಟು ಆರು ಕ್ಷೇತ್ರಗಳ ಪೈಕಿ ನಾಲ್ಕು ಸದ್ಯ ಬಿಜೆಪಿ ವಶದಲ್ಲಿದ್ದು, ಇನ್ನೆರಡು ಜೆಡಿಎಸ್ ತೆಕ್ಕೆಯಲ್ಲಿವೆ. ಬಿಜೆಪಿಯ ಹಾಲಿ ನಾಲ್ವರು ಸದಸ್ಯರ ಪೈಕಿ ಇಬ್ಬರು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಸಭಾಪತಿ ಡಿ. ಎಚ್.ಶಂಕರಮೂರ್ತಿ (ನೈಋತ್ಯ ಪದವೀಧರರ ಕ್ಷೇತ್ರ) ಮತ್ತು ಹಿರಿಯ ಸದಸ್ಯ ರಾಮಚಂದ್ರಗೌಡ (ಬೆಂಗಳೂರು ಪದವೀಧರರ ಕ್ಷೇತ್ರ) ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ಈ ಪೈಕಿ ಶಂಕರ ಮೂರ್ತಿ ತಮ್ಮ ಪರವಾಗಿ ಪುತ್ರ ಅರುಣ್‌ಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರನ್ನು ಕೋರಿದ್ದಾರೆ. ಆದರೆ, ರಾಮಚಂದ್ರಗೌಡ ತಮ್ಮ ಪುತ್ರನಿಗೆ ವಿಧಾನಸಭಾ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇನ್ನುಳಿದ ಇಬ್ಬರು ಸದಸ್ಯರಾದ ಅಮರನಾಥ್ ಪಾಟೀಲ್ (ಈಶಾನ್ಯ ಪದವೀಧರರ ಕ್ಷೇತ್ರ) ಹಾಗೂ ಗಣೇಶ್ ಕಾರ್ಣಿಕ್ (ನೈಋತ್ಯ ಶಿಕ್ಷಕರ ಕ್ಷೇತ್ರ) ಅವರಿಗೆ ಮತ್ತೊಮ್ಮೆ ಟಿಕೆಟ್ ಲಭಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ನೈಋತ್ಯ ಪದವೀಧರರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪೈಪೋಟಿಯೂ ಜೋರಾಗಿಯೇ ಇದೆ ಎಂದು ತಿಳಿದು ಬಂದಿದೆ.

ನೈಋತ್ಯ ಪದವೀಧರರ ಕ್ಷೇತ್ರ: ಹಾಲಿ ಸದಸ್ಯ ಶಂಕರಮೂರ್ತಿ ಅವರ ಪುತ್ರ ಹಾಗೂ ಪಕ್ಷದ ಜಿಲ್ಲಾ ಮುಖಂಡರೂ ಆಗಿರುವ ಅರುಣ್ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ, ಮಾಜಿ ಸಂಸದರೂ ಆಗಿರುವ ಆಯನೂರು ಮಂಜುನಾಥ್ ಅವರು ಪೈಪೋಟಿ ಒಡ್ಡಿದ್ದಾರೆ. ಈ ನಡುವೆ ಸಂಘ ಪರಿವಾರವು ಮತ್ತೊಬ್ಬ ಮುಖಂಡ ಗಿರೀಶ್ ಪಟೇಲ್ ಅವರ ಬೆನ್ನಿಗೆ ನಿಂತಿದೆ. ಪಟೇಲ್ ಪರವಾಗಿ ಕೆ.ಎಸ್.ಈಶ್ವರಪ್ಪ ಒಲವು ಹೊಂದಿದ್ದಾರೆ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ.ಮಂಜುಳಾ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರ: ಪಕ್ಷದ ವಕ್ತಾರ ಅಶ್ವತ್ಥನಾರಾಯಣ ಪ್ರಬಲ ಆಕಾಂಕ್ಷಿ. ವಿಜಯನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಇತರ

ಆಕಾಂಕ್ಷಿಗಳು ಅಶ್ವತ್ಥನಾರಾಯಣ ಅವರನ್ನು ಪರಿಷತ್ತಿಗೆ ಕಳುಹಿಸುವ ಸಿದ್ಧತೆಯಲ್ಲಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಅಶ್ವತ್ಥನಾರಾಯಣ ಪರ ಬೆಂಬಲಕ್ಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಪಕ್ಷದ ಸಹ ವಕ್ತಾರರಾದ ಎ.ಎಚ್.ಆನಂದ್ ಅವರೂ ಸ್ಪರ್ಧಿಸುವ ಉದ್ದೇಶದಿಂದ ಈಗಾಗಲೇ ಕೆಲಸವನ್ನೂ ಆರಂಭಿಸಿದ್ದಾರೆ.

ಆನಂದ್ ಬೆನ್ನಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಇದ್ದಾರೆ ಎನ್ನಲಾಗಿದೆ. ಈ ನಡುವೆ ಉಪನ್ಯಾಸಕರಾಗಿದ್ದ ಡಾ.ಜೈಶಂಕರ್ ಅವರಿಗೆ ಸಂಘ ಪರಿವಾರ ಬೆಂಬಲ ನೀಡುತ್ತಿದೆಯಾದರೂ ಅಶ್ವತ್ಥ ನಾರಾಯಣ ಅಥವಾ ಆನಂದ್ ಅವರ ಪೈಕಿ ಒಬ್ಬರಾದಲ್ಲಿ ಪ್ರಬಲ ಪೈಪೋಟಿ ಒಡ್ಡಬಹುದು ಎನ್ನಲಾಗುತ್ತಿದೆ. ಆಗ್ನೇಯ ಪದವೀಧರರ ಕ್ಷೇತ್ರ: ಈ ಕ್ಷೇತ್ರದಲ್ಲಿ ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತ್ತು. ತುಮಕೂರಿನ ಬಸವರಾಜು ಎಂಬುವರನ್ನು ಕಣಕ್ಕಿಳಿಸಿದ್ದ ಬಿಜೆಪಿಯ ತೀರ್ಮಾನದಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಒಲವೇ ಹೆಚ್ಚಾಗಿತ್ತು. ಹೀಗಾಗಿ,ಈ ಬಾರಿ ಅವರ ಬದಲು ಚೇತನ್‌ಗೌಡ ಎಂಬುವರ

ಹೆಸರು ಬಲವಾಗಿ ಕೇಳಿಬಂದಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಹೆಬ್ಬಾಳದ ಶಾಸಕ ವೈ.ಎ. ನಾರಾಯಣಸ್ವಾಮಿ (ಹಿಂದೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿದ್ದರು) ಚೇತನ್‌ಗೌಡ ಬೆನ್ನಿಗೆ

ನಿಂತಿದ್ದಾರೆ. ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ ಆಕಾಂಕ್ಷಿಯಾಗಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರ: ಬಿಜೆಪಿಗೆ ಹೆಚ್ಚು ನಿರೀಕ್ಷೆ ಇರದ ಕ್ಷೇತ್ರವಾದರೂ ಆಕಾಂಕ್ಷಿಗಳಿಗೇನೂ ಬರವಿಲ್ಲ. ಈ ಹಿಂದೆ

3 ಬಾರಿ ಸ್ಪರ್ಧಿಸಿ ಸೋಲುಂಡಿರುವ ಗುರುನಂಜಯ್ಯ ಅವರ ಹೆಸರು ಈ ಬಾರಿ ಹಿಂದೆ ಸರಿದಿದೆ. ಮಾಧ್ಯಮಿಕ ಶಿಕ್ಷಕರ ಸಂಘದ ಮುಖಂಡರೂ ಆಗಿರುವ ನಿರಂಜನ್, ರಾಜಣ್ಣ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಲಿಂಗರಾಜು ನಡುವೆ ಪೈಪೋಟಿಯಿದೆ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್