ಬಿಜೆಪಿಗೆ ಭ್ರಷ್ಟರು ಬೇಕೇ ವಿನಃ ನನ್ನಂಥವರಲ್ಲ: ಪ್ರಮೋದ್ ಮುತಾಲಿಕ್ ವಿಷಾದ

By Suvarna Web DeskFirst Published Oct 21, 2017, 1:51 PM IST
Highlights

* ಬಿಜೆಪಿ ಸೇರಲು ಪ್ರಮೋದ್ ಮುತಾಲಿಕ್ ಇಂಗಿತ

* ಬಿಜೆಪಿಗೆ ನನ್ನಂಥವರು ಬೇಡ; ಭ್ರಷ್ಟರು ಬೇಕಾಗಿದ್ದಾರೆ: ಮುತಾಲಿಕ್

* 'ಬಿಜೆಪಿ ಅಧಿಕಾರ ಹಿಡಿಯಲು ಮುತಾಲಿಕ್ ಕಾರಣ ಎಂಬುದನ್ನು ಮರೆತಿದ್ದಾರೆ'

* ಬಿಜೆಪಿ ಟಿಕೆಟ್ ಸಿಗದಿದ್ದರೂ ಚುನಾವಣೆಗೆ ಸ್ಪರ್ಧಿಸುವೆ: ಮುತಾಲಿಕ್

ಬಾಗಲಕೋಟೆ(ಅ. 21): ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸೇರುವ ಇಂಗಿತದಲ್ಲಿದ್ದಾರೆ. ಆದರೆ, ಮುತಾಲಿಕ್'ರನ್ನು ಸೇರಿಸಿಕೊಳ್ಳಲು ಬಿಜೆಪಿಯೇ ನಿರಾಸಕ್ತಿ ತೋರುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಮೋದ್ ಮುತಾಲಿಕ್ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರಲು ತಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರೂ ಏನೂ ಪ್ರಗತಿಯಾಗುತ್ತಿಲ್ಲ ಎಂದು ಮುತಾಲಿಕ್ ಬೇಸರಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುತಾಲಿಕ್, ಬಿಜೆಪಿಗೆ ಭ್ರಷ್ಟರು ಬೇಕಾಗಿದ್ದಾರೆಂದು ಆರೋಪಿಸಿದ್ದಾರೆ.

"ಹಿಂದೆ ರಾಜ್ಯದಲ್ಲಿ ತಾವು ಅಧಿಕಾರ ಹಿಡಿಯಲು ಭಜರಂಗದಳ ಮತ್ತು ಮುತಾಲಿಕ್ ಕಾರಣ ಎಂಬುದನ್ನು ಬಿಜೆಪಿ ಮರೆತಿದೆ. ಬಿಜೆಪಿಗೆ ಎಸ್ಸೆಮ್ ಕೃಷ್ಣ, ಸಿ.ಪಿ.ಯೋಗೀಶ್ವರ್ ಅಂತಹವರು ಬೇಕೇ ಹೊರತು ನಮ್ಮಂಥವರು ಬೇಡವಾಗಿದೆ. ಭ್ರಷ್ಟಾಚಾರಿಗಳನ್ನು ಬಿಜೆಪಿ ಕೈಬೀಸಿ ಕರೆಯುತ್ತಿದೆ," ಎಂದು ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥರು ವಿಷಾದಿಸಿದ್ದಾರೆ.

"ನಾನು ಬಿಜೆಪಿ ಸೇರುವ ಕುರಿತು ಆರು ತಿಂಗಳ ಹಿಂದೆಯೇ ಆರೆಸ್ಸೆಸ್'ಗೆ ಮನವಿ ಮಾಡಿಕೊಂಡಿದ್ದೇನೆ. ನಮ್ಮ ಸಂಘಟನೆಯ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್'ವೈರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಹಿಂದುತ್ವಕ್ಕಾಗಿ ನಾನು ರಾಜಕೀಯ ಮಾಡುತ್ತೇನೆ. ಬಿಜೆಪಿ ಟಿಕೆಟ್ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ," ಎಂದು ಪ್ರಮೋದ್ ಮುತಾಲಿಕ್ ಸವಾಲೆಸೆದಿದ್ದಾರೆ.

ಇದೇ ವೇಳೆ, ಟಿಪ್ಪು ಜಯಂತಿ ಆಚರಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಮೋದ್ ಮುತಾಲಿಕ್ ಬಲವಾಗಿ ವಿರೋಧಿಸಿದ್ದಾರೆ. :ಟಿಪ್ಪೂ ಸುಲ್ತಾನ್'ರ ಚರಿತ್ರೆಯನ್ನು ತಿರುಚಿ ಅವರನ್ನು ವೈಭವೀಕರಿಸಲಾಗುತ್ತಿದೆ. ಮುಸ್ಲಿಮ್ ವೋಟಿಗಾಗಿ ಸರಕಾರವು ಟಿಪ್ಪು ಜಯಂತಿ ಆ ಚರಿಸುತ್ತಿದೆ. ಜನರ ಮಾರಣಹೋಮ ಮಾಡಿದ ಟಿಪ್ಪೂ ಸುಲ್ತಾನ್'ನ ಜಯಂತಿ ಆಚರಣೆ ಮೂಲಕ ಕನ್ನಡಿಗರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.

click me!