ಪರರ ವಾಹನ ಪಡೆದು ಸಂಚಾರ ನಿಯಮ ಉಲ್ಲಂಘಿಸುವವರೆ ಹುಷಾರ್..!

By Suvarna Web DeskFirst Published Jan 24, 2018, 10:32 AM IST
Highlights

ಪರರ ವಾಹನ ಪಡೆದು ಸಂಚಾರ ನಿಯಮ ಉಲ್ಲಂಘಿಸುವ ಚಾಲಕರೇ ಹುಷಾರಾಗಿರಿ! ಏಕೆಂದರೆ, ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿ (ಡಿಎಲ್) ಆಧರಿಸಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಡಿಎಲ್ ಅಮಾನತಿಗೂ ಶಿಫಾರಸು ಮಾಡಲಿದ್ದಾರೆ.

ಬೆಂಗಳೂರು (24): ಪರರ ವಾಹನ ಪಡೆದು ಸಂಚಾರ ನಿಯಮ ಉಲ್ಲಂಘಿಸುವ ಚಾಲಕರೇ ಹುಷಾರಾಗಿರಿ! ಏಕೆಂದರೆ, ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿ (ಡಿಎಲ್) ಆಧರಿಸಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಡಿಎಲ್ ಅಮಾನತಿಗೂ ಶಿಫಾರಸು ಮಾಡಲಿದ್ದಾರೆ.

ಶಾಂತಿನಗರದ ಸಾರಿಗೆ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ಅವರು, ಪ್ರಸ್ತುತ ನಗರ ಸಂಚಾರ ಪೊಲೀಸರು ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನೋಂದಣಿ ಪತ್ರ (ಆರ್‌ಸಿ) ಆಧರಿಸಿ ಪ್ರಕರಣ ದಾಖಲಿಸುತ್ತಿದ್ದಾರೆ.

ವಾಹನದ ಮಾಲೀಕ ಬೇರೆ ಇದ್ದು, ಚಾಲಕ ನಿಯಮ ಉಲ್ಲಂಘಿಸಿದರೂ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಾಗುತ್ತಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ವಾಹನದ ಆರ್‌ಸಿ ಅಮಾನತಿಗೆ ಶಿಫಾರಸು ಮಾಡಲಾಗುತ್ತಿದೆ. ಚಾಲಕನ ತಪ್ಪಿಗೆ ಮಾಲೀಕ ಅಮಾನತು ಶಿಕ್ಷೆ ಅನುಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಇನ್ನು ಮುಂದೆ ನಿಯಮ ಉಲ್ಲಂಘನೆ ವೇಳೆ ಚಾಲಕನ ಡಿಎಲ್ ಆಧರಿಸಿ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಸ್ತೆಗಳಲ್ಲಿ ನಿರ್ಲಕ್ಷ್ಯದ ಚಾಲನೆ, ಡ್ರಿಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘಿಸಿದಾಗ ಸಂಚಾರ ಪೊಲೀಸರು ವಾಹನದ ಆರ್‌ಸಿ ಆಧರಿಸಿ ದಂಡ ವಿಧಿಸುತ್ತಾರೆ. ಈ ಮಾದರಿಯ ನಿಯಮ ಉಲ್ಲಂಘನೆ ಪುನರಾವರ್ತನೆಯಾದಾಗ ವಾಹನ ಜಪ್ತಿ ಮಾಡಿ, ಅದರ ಆರ್‌ಸಿಯನ್ನು ಅಮಾನತಿಗೆ ಸಾರಿಗೆ ಇಲಾಖೆಗೆ ಕಳುಹಿಸುತ್ತಾರೆ. ವಾಸ್ತವದಲ್ಲಿ ವಾಹನದ ಮಾಲೀಕ ಬೇರೆ ಇದ್ದು, ಚಾಲಕ ತಪ್ಪು ಮಾಡಿರುತ್ತಾನೆ. ಹಾಗಾಗಿ ಇನ್ನು ಮುಂದೆ ಚಾಲಕನ ಡಿಎಲ್ ಆಧರಿಸಿ ಪ್ರಕರಣ ದಾಖಲಿಸಲಾಗುವುದು. ವಾಹನದ ಆರ್‌ಸಿ, ಇನ್‌ಶ್ಯೂರೆನ್ಸ್, ಮಾಲಿನ್ಯ ಪ್ರಮಾಣ ಪತ್ರ ಇಲ್ಲದಿದ್ದಾಗ ಮಾಲೀಕನ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದರು.

ಈಗಾಗಲೇ ನಗರ ಸಂಚಾರ ಪೊಲೀಸರೊಂದಿಗೆ ವಾಹನಗಳ ನೋಂದಣಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಅವರು ಪರ್ಸನಲ್ ಡಿಜಿಟಲ್ ಅಸಿಸ್ಟೆನ್ಸ್ ಯಂತ್ರದ ಮುಖಾಂತರ ಸಂಚಾರ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಚಾಲನಾ ಪರವಾನಗಿಗಳ ಮಾಹಿತಿಯನ್ನೂ ಹಂಚಿಕೊಳ್ಳುವುದರಿಂದ ನಿಯಮ ಉಲ್ಲಂಘಿಸುವವರ ಡಿಎಲ್ ಆಧರಿಸಿ ದಂಡ ವಿಧಿಸಲು ಸಹಾಯವಾಗಲಿದೆ ಎಂದು ಹೇಳಿದರು.

click me!