ಬೆಳಗಾವಿಯಲ್ಲಿ ಇಂದಿನಿಂದ 10 ದಿನಗಳ ಕಾಲ ಚಳಿಗಾಲ ಅಧಿವೇಶನ ಆರಂಭ

Published : Nov 13, 2017, 08:12 AM ISTUpdated : Apr 11, 2018, 01:03 PM IST
ಬೆಳಗಾವಿಯಲ್ಲಿ ಇಂದಿನಿಂದ 10 ದಿನಗಳ ಕಾಲ ಚಳಿಗಾಲ ಅಧಿವೇಶನ ಆರಂಭ

ಸಾರಾಂಶ

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಪ್ರಸ್ತಾಪದ ಬಗ್ಗೆಯೂ ವಾಕ್ಸಮರ ನಡೆಯುವ ಸಂಭವ ಹೆಚ್ಚಾಗಿದೆ. ಗಣಪತಿ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದಲ್ಲಿ ಕಾಂಗ್ರೆಸ್ ಸರ್ಕಾರವೇನೂ ಸುಮ್ಮನೆ ಕುಳಿತುಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಸರ್ಕಾರ ಕೂಡ ಸಾಕಷ್ಟು ಅಸ್ತ್ರಗಳನ್ನು ತನ್ನ ಬಳಿ ಇರಿಸಿಕೊಂಡೇ ಅಧಿವೇಶನ ಎದುರಿಸಲು ಮುಂದಾಗಿದೆ.

ಸುವರ್ಣಸೌಧ(ಬೆಳಗಾವಿ): ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯಲ್ಪಡುವ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ‘ರಾಜಕೀಯ ಅಧಿವೇಶನ’ವಾಗಿಯೇ ಮಾರ್ಪಡುವುದು ಬಹುತೇಕ ನಿಶ್ಚಿತವಾಗಿದೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ಬೆಳಗಾವಿ ಅಧಿವೇಶನ. ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು, ಆ ಚರ್ಚೆಯ ಫಲವಾಗಿ ಪರಿಹಾರೋಪಾಯ ಕಂಡು ಹಿಡಿಯುವಂತಾಗಬೇಕು ಎಂಬ ಇಲ್ಲಿನ ಜನರ ನಿರೀಕ್ಷೆ ಈ ಬಾರಿಯೂ ಈಡೇರುವ ಲಕ್ಷಣ ಕಂಡು ಬರುತ್ತಿಲ್ಲ. ಹಿಂದಿನ ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿಯ ಅಧಿವೇಶನ ಹಲವು ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯ ರಣೋತ್ಸಾಹದಲ್ಲಿವೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾತ್ರೆ ಆರಂಭಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬರುವ ಡಿಸೆಂಬರ್‌ನಲ್ಲಿ ಯಾತ್ರೆ ಹಮ್ಮಿಕೊಳ್ಳಲು ಸಜ್ಜಾಗಿದೆ. ಈ ವೇಳೆ ಅಧಿವೇಶನದಲ್ಲಿ ಆರೋಪ-ಪ್ರತ್ಯಾರೋಪ ಹೊರತುಪಡಿಸಿ ಪರಿಣಾಮಕಾರಿಯಾದ ಚರ್ಚೆ ನಡೆದು ಪರಿಹಾರ ಹೊರಹೊಮ್ಮುವುದೇ ಎಂಬುದನ್ನು ಕಾದು ನೋಡಬೇಕು. ಉ.ಕರ್ನಾಟಕ ಭಾಗದ ಶಾಸಕರೇ ಈ ಭಾಗದ ಜ್ವಲಂತ ಸಮಸೆಗಳ ಚರ್ಚೆಗೆ ಅವಕಾಶ ನೀಡಬೇಕೆಂಬ ಆಗ್ರಹವನ್ನು ಬಲವಾಗಿ ಮಂಡಿಸುವುದು ಕಡಮೆ.

ಹಾಗೆ ಕೆಲವರು ಒತ್ತಾಯಿಸಿ ಚರ್ಚೆ ನಡೆದರೂ ಅದರಲ್ಲಿ ಭಾಗಿಯಾಗುವವರ ಸಂಖ್ಯೆಯೂ ಅಷ್ಟಕಷ್ಟೆ ಎಂಬಂತಿರುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸಿ ಸದನದ ಒಳಗೆ ಹೋರಾಟ ನಡೆಸು ವುದಾಗಿ ಘೋಷಿಸಿದೆ. ಹಾಗಂತ ಸದನದ ಕಲಾಪಕ್ಕೆ ತೀವ್ರ ತೊಂದರೆ ಉಂಟು ಮಾಡುವ ಸಾಹಸಕ್ಕೆ ಹೋಗಲಾರದು. ಹಾಗೆ ಮಾಡಿದಲ್ಲಿ  ಅದು ಉತ್ತರ ಕರ್ನಾಟಕದ ಭಾಗದ ಜನರಲ್ಲಿ ತಪ್ಪು ಸಂದೇಶ ರವಾನೆಯಾಗಬಹುದು ಎಂಬ ಆತಂಕವೂ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ವಿವಿಧ ವಿಷಯಗಳ ಬಗ್ಗೆ ವಾಕ್ಸಮರ

ಇದರೊಂದಿಗೆ ವಿವಿಧ ಕಾಂಗ್ರೆಸ್ ಮುಖಂಡರ ಮೇಲಿನ ಐಟಿ ದಾಳಿ ಪ್ರಕರಣವೂ ಪ್ರಸ್ತಾಪವಾಗಿ ವಾಕ್ಸಮರ ನಡೆಯುವ ಸಾಧ್ಯತೆಯಿದೆ. ನೇರವಾಗಿ ಈ ವಿಷಯ ಪ್ರಸ್ತಾಪವಾಗದಿದ್ದರೂ ಪರೋಕ್ಷವಾಗಿ ಇತರ ವಿಷಯಗಳ ಚರ್ಚೆ ವೇಳೆ ಆದಾಯ ತೆರಿಗೆ ಇಲಾಖೆಯ ದಾಳಿ ಸದನದ ಕಲಾಪದ ವಾತಾವರಣವನ್ನು ಬಿಸಿಗೊಳಿಸುವುದಂತೂ ನಿಚ್ಚಳ. ಜತೆಗೆ ರಾಜ್ಯದಲ್ಲಿ ಸದ್ಯ

ಪ್ರಮುಖವಾಗಿ ಕೇಳಿಬರುತ್ತಿರುವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಪ್ರಸ್ತಾಪದ ಬಗ್ಗೆಯೂ ವಾಕ್ಸಮರ ನಡೆಯುವ ಸಂಭವ ಹೆಚ್ಚಾಗಿದೆ. ಗಣಪತಿ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದಲ್ಲಿ ಕಾಂಗ್ರೆಸ್ ಸರ್ಕಾರವೇನೂ ಸುಮ್ಮನೆ ಕುಳಿತುಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಸರ್ಕಾರ ಕೂಡ ಸಾಕಷ್ಟು ಅಸ್ತ್ರಗಳನ್ನು ತನ್ನ ಬಳಿ ಇರಿಸಿಕೊಂಡೇ ಅಧಿವೇಶನ ಎದುರಿಸಲು ಮುಂದಾಗಿದೆ. ಅದರಲ್ಲಿ ಬಿಜೆಪಿಯ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ಇಂಧನ ಖಾತೆಯ ಹೊಣೆ ಹೊತ್ತು ನಡೆಸಿದ್ದಾರೆ ಎನ್ನಲಾದ ಅಕ್ರಮಗಳ ಕುರಿತ ಸದನ ಸಮಿತಿ ವರದಿ ಪ್ರಮುಖವಾದದ್ದು. ಈಗಾಗಲೇ ಪರೋಕ್ಷವಾಗಿ ಈ ಸಮಿತಿಯ ಮಾಹಿತಿಯನ್ನು ಹೊರಹಾಕಿ

ರುವ ಸರ್ಕಾರ ಅದರ ಬಿಸಿ ಮುಟ್ಟಿಸಿದೆ. ಈ ವರದಿ ಪ್ರಸಕ್ತ ಅಧಿವೇಶನದಲ್ಲಿ ಮಂಡನೆಯಾ ಗುವುದೇ ಅಥವಾ ರಾಜಕೀಯ ಕೊಡು-ಕೊಳ್ಳು ವಿಕೆಯ ಭಾಗವಾಗಿ ಮುಂದೂಡಲ್ಪಡುವುದೇ ಎಂಬುದು ಕುತೂಹಲಕರವಾಗಿದೆ. ಇನ್ನುಳಿದಂತೆ ಕೆಲವು ಪ್ರಮುಖ ವಿಧೇಯಕಗಳು ಮಂಡನೆಯಾಗುವ ನಿರೀಕ್ಷೆಯಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆ ಲೆಯಲ್ಲಿ ಈಗಾಗಲೇ ಶಾಸಕರು ತಮ್ಮ ಕ್ಷೇತ್ರಗಳತ್ತ ಮುಖ ಮಾಡಿರುವುದರಿಂದ ಅಧಿವೇಶನ ಗಂಭೀರವಾಗಿ ನಡೆಯುವುದೇ ಅಥವಾ ಕೇವಲ ರಾಜಕಾರಣ ಗುರಿಯಾಗಿಸಿಕೊಂಡು ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗುವುದೇ ಎನ್ನುವುದು ಎರಡು ಅಥವಾ ಮೂರು ದಿನಗಳಲ್ಲಿ ಸ್ಪಷ್ಟವಾಗಿ ಹೊರಬೀಳಲಿದೆ.

http://kpepaper.asianetnews.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಬೆಂಗಳೂರು: ಸೈಬರ್ ವಂಚನೆ ತಡೆಗೆ ಎಐ ಅಸ್ತ್ರ ಪ್ರಯೋಗ