ಅಂಬೇಡ್ಕರ್ ಸಹಾಯಹಸ್ತ ಯೋಜನೆ: ನರೇಗಾ, ಕೃಷಿ ಕಾರ್ಮಿಕರಿಗೆ ಬಂಪರ್

Published : Sep 18, 2017, 04:13 PM ISTUpdated : Apr 11, 2018, 12:36 PM IST
ಅಂಬೇಡ್ಕರ್ ಸಹಾಯಹಸ್ತ ಯೋಜನೆ: ನರೇಗಾ, ಕೃಷಿ ಕಾರ್ಮಿಕರಿಗೆ ಬಂಪರ್

ಸಾರಾಂಶ

ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಇದೆ ಭಾರೀ ಸೌಲಭ್ಯ | ಇದೀಗ ನರೇಗಾ, ಕೃಷಿ ಕಾರ್ಮಿಕರಿಗೂ ವಿಸ್ತರಿಸಲು ಸರ್ಕಾರ ಸಜ್ಜು | ಈ ರೀತಿ ಸೌಲಭ್ಯ ನೀಡಲಿರುವ ದೇಶದ ಮೊದಲ ರಾಜ್ಯ ಕರ್ನಾಟಕ 20 ಲಕ್ಷ: ಯೋಜನೆ ಜಾರಿ ಬಳಿಕ ಇದರ ಪ್ರಯೋಜನ ಪಡೆಯುವ ಕಾರ್ಮಿಕರು 125ರು.: ಸೌಲಭ್ಯ ಪಡೆಯಲು ಪ್ರತಿ ಕಾರ್ಮಿಕ ಪಾವತಿಸಬೇಕಾದ ಹಣ 6000 ಕೋಟಿ: ಈ ಯೋಜನೆ ಜಾರಿಗಾಗಿ ಮೀಸಲಿಡಲಾಗಿರುವ ಮೊತ್ತ

ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಬಾರಿಗೆ ‘ನರೇಗಾ’ ಯೋಜನೆಯ ಕೃಷಿ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರನ್ನೂ ನಿರ್ಮಾಣ ಕಾರ್ಮಿಕರು ಎಂದು ರಾಜ್ಯ ಸರ್ಕಾರ ಪರಿಗಣಿಸಿದೆ. ಅವರಿಗಾಗಿ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಎಂಬ ಯೋಜನೆ ರೂಪಿಸಿ ಭರ್ಜರಿ ಕಲ್ಯಾಣ ಕಾರ್ಯಕ್ರಮ ಮಹಾಪೂರ ಹರಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಸಂವಿಧಾನಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ 75ನೇ ವರ್ಷದ ನೆನಪಿಗಾಗಿ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆ ಜಾರಿಗೊಳಿಸಿರುವ ಕಾರ್ಮಿಕ ಇಲಾಖೆಯು ನರೇಗಾ ಕಾರ್ಮಿಕರು 125 ರು. ಪಾವತಿಸಿ ಸ್ಥಳೀಯ ಕಾರ್ಮಿಕ ಬಂಧು ಕಚೇರಿಯಲ್ಲಿ ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊಂಡರೆ ಸಾಕು ಹತ್ತಾರು ಭರಪೂರ ಸೌಲಭ್ಯ ನೀಡಲಿದೆ.

ಸ್ಮಾರ್ಟ್ ಕಾರ್ಡ್: ನಿರ್ಮಾಣ ಕಾರ್ಮಿಕರು ಅರ್ಥಾತ್ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ಅಸ್ತಿತ್ವದಲ್ಲಿದ್ದ ಯೋಜನೆಗಳನ್ನು ನರೇಗಾ ಯೋಜನೆಯಲ್ಲಿರುವ ಕೃಷಿ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರಿಗೆ ನೀಡಲಿದೆ. ಅಂದರೆ, ಸುಮಾರು 20 ಲಕ್ಷ ಕಾರ್ಮಿಕರನ್ನು ನೋಂದಾಯಿಸುವ ಮೂಲಕ ಅವರಿಗೆ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆಯ ಸೌಲಭ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ.

ನರೇಗಾ ಕಾರ್ಮಿಕರನ್ನೂ ದೇಶದಲ್ಲೇ ಮೊದಲ ಬಾರಿಗೆ ನಿರ್ಮಾಣ ಕಾರ್ಮಿಕರಾಗಿ ಪರಿಗಣಿಸಿ ನೋಂದಣಿ ಮಾಡುತ್ತಿದ್ದೇವೆ. ನೋಂದಣಿ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿದ್ದು ಬಳ್ಳಾರಿಯಲ್ಲಿ 50 ಸಾವಿರ ನೋಂದಣಿ ಮಾಡಿದ್ದೇವೆ. ಸಂತೋಷ್ ಲಾಡ್, ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ

ಜತೆಗೆ, ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ವಿಶೇಷ ನೋಂದಣಿ ಅಭಿಯಾನಕ್ಕೆ ಕಾರ್ಮಿಕ ಇಲಾಖೆ ಚಾಲನೆ ನೀಡಿದೆ.

ಸಹಾಯಧನ: ಪ್ರತಿ ವರ್ಷವೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲಾಗುವುದು. ಪ್ರಾಥಮಿಕ ಶಿಕ್ಷಣಕ್ಕಾಗಿ 2 ಸಾವಿರ ರು, ಮಾಧ್ಯಮಿಕ ಶಿಕ್ಷಣಕ್ಕಾಗಿ 3 ಸಾವಿರ ರು, ಪ್ರೌಢ ಶಿಕ್ಷಣಕ್ಕಾಗಿ 6 ಸಾವಿರ ರು, ಪದವಿ ಪೂರ್ವ ಶಿಕ್ಷಣಕ್ಕಾಗಿ 6 ಸಾವಿರದಿಂದ 8 ಸಾವಿರ ರು, ಐಟಿಐ ಶಿಕ್ಷಣಕ್ಕಾಗಿ 7 ಸಾವಿರ ರು, ಪದವಿ ಶಿಕ್ಷಣಕ್ಕಾಗಿ 10 ಸಾವಿರ ರು, ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ 20 ಸಾವಿರ (ಪ್ರವೇಶಕ್ಕೆ 25 ಸಾವಿರ), ವೈದ್ಯಕೀಯ ಶಿಕ್ಷಣಕ್ಕಾಗಿ 25 ಸಾವಿರ (ಪ್ರವೇಶಕ್ಕೆ 30 ಸಾವಿರ), ಉನ್ನತ ಶಿಕ್ಷಣಕ್ಕೆ 10 ಸಾವಿರ (ಪ್ರವೇಶಕ್ಕೆ 20 ಸಾವಿರ), ಪಿಎಚ್‌ಡಿ ಶಿಕ್ಷಣಕ್ಕಾಗಿ 20 ಸಾವಿರು ರು.ವರೆಗೆ ಸಹಾಯ ಧನ ನೀಡಲಾಗುವುದು.

12 ಜಿಲ್ಲೆಗಳಲ್ಲಿ ಅಭಿಯಾನ: ಮೊದಲ ಹಂತವಾಗಿ ಬಳ್ಳಾರಿ, ರಾಯಚೂರು, ಕಲಬುರ್ಗಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ದಾವಣಗೆರೆ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ, ಯಾದಗಿರಿ ಸೇರಿ 12 ಜಿಲ್ಲೆಗಳಲ್ಲಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬಳ್ಳಾರಿಯಲ್ಲಿ ಈಗಾಗಲೇ 50 ಸಾವಿರ ಮಂದಿಯ ನೋಂದಣಿ ಕಾರ್ಯ ಮುಗಿದಿದೆ. ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಲ್ಲೂ ಅಭಿಯಾನ ನಡೆಸಿ ಅರ್ಹ ನಿರ್ಮಾಣ ಕಾರ್ಮಿಕರಿಗೆಲ್ಲರಿಗೂ ಯೋಜನೆಯ ಲಾಭ ದೊರೆಯುವಂತೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದ್ದಾರೆ. 2008ರಿಂದ 2013ರವರೆಗೆ ಕಳೆದ ಸರ್ಕಾರದ ಐದು ವರ್ಷದಲ್ಲಿ 2.73 ಲಕ್ಷ ಕಟ್ಟಡ ಕಾರ್ಮಿಕರನ್ನು ಗುರುತಿಸಿ ನೊಂದಾಯಿಸಲಾಗಿತ್ತು. ಈ ವೇಳೆ 1.85 ಲಕ್ಷ ಫಲಾನುಭವಿಗಳಿಗೆ 179.30 ಕೋಟಿ ವೆಚ್ಚದಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿತ್ತು. 2013ರಿಂದ 2017ರವರೆಗೆ ನಾಲ್ಕು ವರ್ಷದಲ್ಲಿ 8.34 ಲಕ್ಷ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೆ, ಇನ್ನೂ 10 ಲಕ್ಷ ಕಟ್ಟಡ ಕಾರ್ಮಿಕರನ್ನು ನೋಂದಾಯಿಸುವ ಉದ್ದೇಶವಿದೆ. ಜತೆಗೆ, ಹೊಸದಾಗಿ ನರೇಗಾ ಕಾರ್ಮಿಕರನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುತ್ತಿದೆ. ಕಾರ್ಮಿಕ ಇಲಾಖೆಗೆ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ನರೇಗಾ ಯೋಜನೆ ಅಡಿಯಲ್ಲಿ 20 ಲಕ್ಷ ಕಾರ್ಮಿಕರು ಇದ್ದು, ಅವರನ್ನು ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಇಲಾಖೆಯ ಬಳಿ ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಲಭ್ಯವಿರುವ 6 ಸಾವಿರ ಕೋಟಿ ಇದ್ದು, ಈ ಎಲ್ಲಾ ಯೋಜನೆಗಳಿಗೆ ಆ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಲಾನುಭವಿಯಾಗಲು ಏನು ಮಾಡಬೇಕು?

ಸ್ಥಳೀಯ ಕಾರ್ಮಿಕ ಬಂಧು ಕಚೇರಿಯಲ್ಲಿ ಕಟ್ಟಡ ಕಾರ್ಮಿಕರಾಗಿ ನೋಂದಾಯಿಸಿಕೊಳ್ಳಬೇಕು. ಈ ವೇಳೆ ಆಧಾರ್ ಕಾರ್ಡ್ ನಕಲು, ಮತದಾರರ ಗುರುತಿನ ಚೀಟಿ ನಕಲು, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಪಾಸ್ ಬುಕ್ ನಕಲು, ಸ್ಥಿರ ಹಾಗೂ ಮೊಬೈಲ್ ದೂರವಾಣಿ ಸಂಖ್ಯೆ, 90 ದಿನಗಳ ಕಾಲ ಯಾವುದೇ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ನೀಡಬೇಕು. ಕಟ್ಟಡ ಅಥವಾ ನಿರ್ಮಾಣ ಕಾರ್ಮಿಕರಾಗಿ ದೃಢೀಕರಿಸಲು ವೇತನ ಪತ್ರ, ಹಾಜರಾತಿ ದಾಖಲೆ, ಉದ್ಯೋಗದಾತರಿಂದ ಪ್ರಮಾಣ ಪತ್ರ, ನೋಂದಾಯಿತ ಟ್ರೇಟ್ ಯೂನಿಯನ್‌ನಿಂದ  ಪ್ರಮಾಣ ಪತ್ರ, ಗ್ರಾಮ ಪಂಚಾಯಿತಿಯಿಂದ ದೃಢೀಕರಿಸಿದ ನಕಲು ಎನ್‌ಎಂಆರ್ (ಮಸ್ಟರ್ ರೋಲ್) ಪ್ರತಿ, ಪಾಸ್‌ಪೋರ್ಟ್ ಗಾತ್ರದ ಫೋಟೊ ನೀಡಬೇಕು. ಕಟ್ಟಡ ಕಾರ್ಮಿಕರು ಕ್ರೆಡಾಯ್, ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ, ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅಥವಾ ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟ ಯಾವುದಾದರೂ ಅಧಿಕಾರಿಗಳಿಂದ ಪ್ರಮಾಣ ಪತ್ರ ತಂದು ನೀಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ