ರಾಜ್ಯದಲ್ಲಿ ಮೀಸಲಾತಿ ಶೇ.70ಕ್ಕೆ ಏರಿಕೆ?

Published : Nov 30, 2016, 03:21 AM ISTUpdated : Apr 11, 2018, 12:53 PM IST
ರಾಜ್ಯದಲ್ಲಿ ಮೀಸಲಾತಿ ಶೇ.70ಕ್ಕೆ ಏರಿಕೆ?

ಸಾರಾಂಶ

ಮೀಸಲಾತಿ ಪರ ಬಿಜೆಪಿ ಒಂದೇ ಒಂದು ಕ್ರಮ ಕೈಗೊಂಡಿರುವ ನಿದರ್ಶನ ನೀಡಿದರೆ ರಾಜಕೀಯ ನಿವೃತ್ತಿ ಸ್ವೀಕರಿಸುವುದಾ​ಗಿ ಸಿಎಂ ಸವಾಲೆಸೆದರು.

ವಿಧಾನ ಪರಿಷತ್‌: ರಾಜ್ಯದಲ್ಲಿ ಪರಿಶಿಷ್ಟಜಾತಿ, ಪಂಗಡ, ಇತರೆ ಹಿಂದುಳಿದವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗ ನೀಡುವಲ್ಲಿ ಮೀಸಲಾತಿ ಮಿತಿಯನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಳ ಮಾಡುವ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಪರಿಷತ್ತಿನಲ್ಲಿ ಮಂಗಳವಾರ ಪ್ರಸ್ತಾಪವಾದ ಮೀಸ​ಲಾತಿ ವಿಷಯದ ಬಗ್ಗೆ ಸುದೀರ್ಘ ಚರ್ಚೆ ಬಳಿಕ ಪ್ರತಿಕ್ರಿಯಿಸಿದ ಅವ​ರು, ಹಿಂದುಳಿದ ವರ್ಗಗಳ ಆಯೋಗವು ಡಿಸೆಂಬರ್‌, ಜನವರಿಯಲ್ಲಿ ಜಾತಿಗಣತಿ ವರದಿ ಸಲ್ಲಿಸುವ ಸಾಧ್ಯತೆ ಇದೆ. ಆ ವರ​ದಿ​ಯನ್ನು ಸದನದಲ್ಲಿ ಮಂಡಿಸಿ ಕಾಯ್ದೆ ತಿದ್ದು​ಪಡಿ ತರಲಾಗುವುದು ಎಂದರು. 

ರಾಜ್ಯದ ಹಿಂದುಳಿದ, ಮುಂದುವರಿದ, ದಲಿತ, ಅಲ್ಪಸಂಖ್ಯಾತ, ಮಹಿಳೆಯರು ಸೇರಿ ಎಲ್ಲ ವರ್ಗದವರಿಗೆ ನ್ಯಾಯ ಒದಗಿಸಲಾಗುವುದು ಎಂದ ಸಿಎಂ, ಮೀಸಲಾತಿ ಪರ ಬಿಜೆಪಿ ಒಂದೇ ಒಂದು ಕ್ರಮ ಕೈಗೊಂಡಿರುವ ನಿದರ್ಶನ ನೀಡಿದರೆ ರಾಜಕೀ ಯ ನಿವೃತ್ತಿ ಸ್ವೀಕರಿಸುವುದಾ​ಗಿ ಸವಾಲೆಸೆದರು.

ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗ ನೀಡುವಲ್ಲಿ ಮೀಸಲಾತಿ ಮೀತಿಯನ್ನು ಶೇ.50ರಿಂದ ಶೇ.70ಕ್ಕೆ ನಿಗದಿಪಡಿಸಬೇಕೆಂದು ಕೋರಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, ಎಚ್‌.ಎಂ. ರೇವಣ್ಣ, ಮೋಟಮ್ಮ ಅವರು ನಿಯಮ 72ರಡಿ ಮಂಡಿಸಿದ ಗಮನ ಸೆಳೆಯುವ ನಿಲುವಳಿ ಬಗ್ಗೆ ಸುಮಾರು ಒಂದೂ ಮುಕ್ಕಾಲು ತಾಸು ಚರ್ಚೆ ನಡೆಯಿತು. ಉಗ್ರಪ್ಪ ಅವರ ಪ್ರಸ್ತಾಪಕ್ಕೆ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಸೇರಿ ಬಿಜೆಪಿ ಸದಸ್ಯರು ಬೆಂಬಲಿಸಿದಾಗ ಪ್ರತಿಕ್ರಿಯಿಸಿದ ಸಚಿವ ಎಚ್‌. ಆಂಜನೇಯ, ಮೀಸಲಾತಿ ಮಿತಿ ಶೇ.50​ರಷ್ಟುಮೀರಬಾರದು ಎಂಬುದಾಗಿ ಸುಪ್ರೀಂ ಕೋರ್ಟ್‌ನ ಆದೇಶವಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಲಾ​ಗುವುದು ಎಂದರು.

ಇದಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷ ಸದಸ್ಯರು ಮಧ್ಯಾಹ್ನ 3.30ಕ್ಕೆ ಮತ್ತೆ ಕಲಾಪ ಆರಂಭವಾಗು​ತ್ತಿದ್ದಂತೆ ಸಮರ್ಪಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಮಾತನಾಡಲಾರಂಭಿಸಿದ ಸಿಎಂ ಸಿದ್ದರಾಮಯ್ಯ, ಅವಕಾಶ ಸಿಕ್ಕಾಗಲೆಲ್ಲ ಮಾತಿನಲ್ಲಿ ತಿವಿಯುತ್ತಿದ್ದುದು ಬಿಜೆಪಿ ಸದಸ್ಯರನ್ನು ಕೆರಳುವಂತೆ ಮಾಡಿತು. ಮೇಲ್ಮನೆಯಲ್ಲಿ ಪ್ರತಿಕ್ರಿಯೆ ನೀಡಲಾರಂಭಿಸಿದ ಸಿಎಂ, ಸಂವಿಧಾನದ ವಿಧಿ 15 (4), 16 (4)ರಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗ ಮೀಸ ಲಾತಿ ಕೊಡಬೇಕು ಎಂಬ ಉಲ್ಲೇಖವಿದ್ದರೂ ಯಾವುದೇ ಮಿತಿ ಹಾಕಿಲ್ಲ. ಆದರೆ, ಸುಪ್ರೀಂ ಕೋರ್ಟ್‌ ಮೀಸಲಾತಿ ಮಿತಿ ಶೇ.50ರಷ್ಟುಮೀರಬಾರದು ಎಂದು ಆದೇ​ಶಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬ ಪ್ರಸ್ತಾಪಕ್ಕೆ ಬಿಜೆಪಿಯವರು ಬೆಂಬಲಿಸುತ್ತಿರುವುದು ಉತ್ತಮ. ಏಕೆಂದರೆ ಹಿಂದೆಲ್ಲ ಬಿಜೆಪಿ ಮೀಸಲಾತಿಗೆ ವಿರುದ್ಧವಾಗಿತ್ತು ಎಂದು ಚುಚ್ಚಿದರು.

ಇದಕ್ಕೆ ಕೆರಳಿದ ಪ್ರತಿಪಕ್ಷ ನಾಯಕ ಈಶ್ವರಪ್ಪ ಪ್ರತಿಕ್ರಿಯೆ ಕೊಡಿ, ರಾಜಕೀಯ ಮಾತನಾಡಬೇಡಿ ಎಂದರು. ಆಗ ಸಿಎಂ, ಸತ್ಯಾಂಶ ಹೇಳಿದರೆ ರಾಜ​ಕಾ​ರಣ ಮಾಡಿದಂತಾಗುತ್ತದೆಯೇ? ಮಂಡಲ್‌ ಆಯೋಗವನ್ನು ಬಿಜೆಪಿ ವಿರೋಧಿಸಿದ್ದು ಹೌದೋ, ಅಲ್ಲವೋ. ಆಡ್ವಾಣಿ ರಥಯಾತ್ರೆ ನಡೆ​ಸಿದ್ದು, ಅರ್ಜು ನ್‌ ಸಿಂಗ್‌ ಉನ್ನತ ಶಿಕ್ಷಣದಲ್ಲಿ ಮೀ​ಸಲಾತಿ ಕಲ್ಪಿಸಲು ಮುಂದಾದಾಗ ವಿರೋಧಿಸಿದ್ದು ಸುಳ್ಳೋ, ನಿಜವೋ ಹೇಳಿ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದವರು, ಮಹಿಳೆ​ಯರಿಗೆ ಮೀಸಲಾತಿ ಕಲ್ಪಿಸಿದ್ದನ್ನು ಪ್ರಶ್ನಿಸಿ ರಾಮಾ ಜೋಯಿಸ್‌ ರಿಟ್‌ ಅರ್ಜಿ ಸಲ್ಲಿಸಿದ್ದು ಸುಳ್ಳೇ ಎಂದು ಕಾಲೆಳೆದರು.

ಆಗ ಈಶ್ವರಪ್ಪ ಮತ್ತು ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ, ಅದು ರಾಮಾ ಜೋಯಿಸ್‌ ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿಯ​ದ್ದಲ್ಲ ಎಂದರು. ಇದಕ್ಕೆ ಸುಮ್ಮನಾಗದ ಸಿಎಂ, ನೀವು ಈಗ ನಮ್ಮ ದಾರಿಗೆ ಬರುತ್ತಿದ್ದೀರಿ. ನಿಮಗೆ ಅನಿವಾರ್ಯವಾಗಿರುವುದರಿಂದ ಹಿಂದುಳಿದವರ ಹೆಸರೇಳುತ್ತಿದ್ದೀರಿ ಎಂದು ಕುಟುಕಿದರು. ಇದಕ್ಕೆ ಆಕ್ರೋಶಗೊಂಡ ಈಶ್ವರಪ್ಪ, ಹಿಂದುಳಿದ ವರ್ಗದ​ವರನ್ನು ಗುತ್ತಿಗೆ ಪಡೆದಿದ್ದೀರಾ ಎಂದು ಪ್ರಶ್ನಿಸಿದರು. 

ಆಗ ಸಿಎಂ, ಪರಿಶಿಷ್ಟಜಾತಿ, ಪಂಗಡ ದವರ ಕಲ್ಯಾಣಕ್ಕಾಗಿ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿದವರು ಯಾರು ? ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಹೇಳಿ​ದ​ರು.

ನಿದರ್ಶನ ನೀಡಿದರೆ ರಾಜಕೀಯ ನಿವೃತ್ತಿ
1000 ಕೋಟಿ ರೂ. ಚಿಲ್ಲರೆ ಕಾಸಿನ ಬಗ್ಗೆ ಹೇಳುತ್ತೀರಿ. ಹಿಂದುಳಿದವರ ಕಲ್ಯಾಣಕ್ಕಾಗಿ ನಾಲ್ಕೈದು ಸಾವಿರ ಕೋಟಿ ಬಿಡುಗಡೆ ಮಾಡಿರುವ ನಮಗೆ ಪಾಠ ಹೇಳಿಕೊಡುತ್ತೀರಾ? ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ನಿಮಗೆ ಅದು ಅರ್ಥವೇ ಆಗುವುದಿಲ್ಲ. ಬಿಜೆಪಿ ಮೀಸಲು ಪರ ಆದೇಶ ಹೊರಡಿಸಿರುವ ಒಂದು ನಿದರ್ಶನ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸವಾಲೆಸೆದರು. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅದರಂತೆ ರಾಜ್ಯದಲ್ಲೂ ಸಂವಿಧಾನದ ಚೌಕಟ್ಟಿನಲ್ಲಿ ಮೀಸಲು ಮಿತಿ ಏರಿಕೆಗೆ ಗಂಭೀರ ಚಿಂತನೆ ನಡೆಸಲಾಗುವುದು. ಆಗ ಸಂವಿಧಾನದ ತಿದ್ದುಪಡಿಯಾಗಬೇಕಿದ್ದು, ಕೇಂದ್ರದ ಮೊರೆಗೆ ಹೋಗುವಾಗ ಈಶ್ವರಪ್ಪ ಮುಂದಾಳತ್ವ ವಹಿಸಲಿ ಎಂದು ಕುಟುಕಿದರು. ಜತೆಗೆ, ಹಿಂದುಳಿದವರ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಶ್ರಮಿಸುತ್ತೇವೆಯೇ ಹೊರತು ನಿಮ್ಮಂತೆ ಹಿಂದ ಅಲ್ಲ, ನಾವು ಅಹಿಂದ ಎಂದಾಗ ಕಾಂಗ್ರೆಸ್‌ ಸದಸ್ಯರು ಮೇಜು ಕುಟ್ಟಿ ಬೆಂಬಲಿಸಿದರು.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ
₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ