
ಹೊಸನಗರ(ಮೆ.27): ಸೋಸಲೆಯ ವ್ಯಾಸರಾಜ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ್ದ ರಾಜ್ಯ ಸರ್ಕಾರ ಈಗ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಮುಂದಾಗಿದೆ. ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಂದ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲಿಕ್ಕೆ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಖುಂಟಿಯಾ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ನೇತೃತ್ವದಲ್ಲಿ ರಚನೆಯಾಗುವ ಸಮಿತಿಗೆ 3 ಮಂದಿಯನ್ನು ನೇಮಿಸಬೇಕು ಅಂತ ಆದೇಶದಲ್ಲಿ ಹೇಳಲಾಗಿದೆ. ವಿಚಾರಣೆ ನಡೆಸಿದ ನಂತರ ವರದಿಯನ್ನು ಕಂದಾಯ ಇಲಾಖೆಯ ಅಧೀನದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಬೇಕು. ಈ ವರದಿಯನ್ನು ಪರಿಶೀಲಿಸಿದ ನಂತರ ಶ್ರೀ ಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಸಂವಿಧಾನದ 162ನೇ ವಿಧಿ ಅನ್ವಯ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಘವೇಶ್ವರ ಶ್ರೀಗಳು ಮತ್ತು ರಾಮಚಂದ್ರಾಪುರ ಮಠದಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಅವ್ಯವಹಾರಗಳ ಕುರಿತು ಎಸಗಿರುವ ಆರೋಪಗಳ ಕುರಿತು ತನಿಖೆ ನಡೆಸಲು ಮೇಲ್ನೋಟಕ್ಕೆ ಸಾಬೀತಾಗುವಂತಹ ದಾಖಲೆಗಳು ಲಭ್ಯವಿದೆ. ಇದೊಂದು ಸೂಕ್ಷ್ಮ ಪ್ರಕರಣ. ಇದರಲ್ಲಿ ಭಾವನಾತ್ಮಕ ಅಂಶಗಳು ಇರುವ ಕಾರಣ ಪೂರ್ಣ ಪ್ರಮಾಣದ ತನಿಖೆ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಯಾ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರಾಘವೇಶ್ವರ ಶ್ರೀಗಳು ಮಠಾಧಿಪತಿಯಾಗಿ ಅನುಸರಿಸಬೇಕಾದ ಧರ್ಮ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಮಠದ ಹಣಕಾಸು ವ್ಯವಹಾರಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ದೂರುಗಳಿವೆ ಅಂತ ಎದುರ್ಕುಳ ಈಶ್ವರ್ ಭಟ್ ಮತ್ತಿತರರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಶ್ರೀಗಳು ತಮ್ಮ ನಡತೆಯಿಂದ ಮಠದ ಘನತೆಯನ್ನು ಕುಗ್ಗಿಸಿದ್ದಾರೆ. ಸರ್ಕಾರ ಮಠದ ದುರ್ವವ್ಯವಹಾರಗಳನ್ನು ಗಮನಿಸಿಯೂ ಕಣ್ಣು ಮುಚ್ಚಿ ಕುಳಿತಿದೆ. ನಾವು ಶ್ರೀಮಠದ ಅನನ್ಯ ಭಕ್ತರಾಗಿದ್ದು ಇಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಯಲು ಕೂಡಲೇ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಈ ಪಿಐಎಲ್ ಸಲ್ಲಿಸಲಾಗಿತ್ತು.
ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.