ವರ ಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದಿಂದ ಮೈಸೂರು ಸಿಲ್ಕ್ ‘ಸೀರೆ ಭಾಗ್ಯ’!

First Published Jun 29, 2018, 7:38 PM IST
Highlights

ವರ ಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭಜರ್ಜರಿ ಕೊಡುಗೆ 

ಸರ್ಕಾರದಿಂದ ಮೈಸೂರು ಸಿಲ್ಕ್ ‘ಸೀರೆ ಭಾಗ್ಯ’

ಅಗ್ಗದ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಉಡುಗೊರೆ

ರೇಷ್ಮೆ ಸಚಿವ ಸಾ.ರಾ. ಮಹೇಶ್ ಮಾಹಿತಿ
 

ಬೆಂಗಳೂರು(ಜೂ.29): ಈ ಬಾರಿ ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸಮಿಶ್ರ ಸರ್ಕಾರ ಮಹಿಳೆಯರಿಗೆ ಭರ್ಜರಿ ಉಡುಗೊರೆ ಕೊಡಲು ತಯಾರಿ ನಡೆಸಿದೆ. ರೇಷ್ಮೆ ಇಲಾಖೆಯಿಂದ ನೂತನ ವಹಿವಾಟಿಗೆ ಕೈ ಹಾಕಿದ್ದು, ಅಗ್ಗದ ದರದಲ್ಲಿ ರೇಷ್ಮೆ ಸೀರೆ ಕೊಡಲು ತಯಾರಿ ನಡೆದಿದೆ. ಮೈಸೂರಿನಲ್ಲಿ ಮಾಧ್ಯಮ ಸಂವಾದ ನಡೆಸಿದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಉಡುಗೊರೆ ನೀಡುವ ಬಗ್ಗೆ ಮಾತನಾಡಿದ ಸಚಿವರು, ಕೇವಲ ನಾಲ್ಕೂವರೆ ಸಾವಿರಕ್ಕೆ ಉತ್ಕೃಷ್ಟ ದರ್ಜೆಯ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು. ಅಲ್ಲದೆ ಮೈಸೂರಿನಲ್ಲಿ ತಯಾರಾಗುವ ರೇಷ್ಮೆ ಸೀರೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ಮಾರಾಟ ಮಾಡುವ ದೃಷ್ಟಿಯಿಂದ ಇತರ ಪ್ರವಾಸಿ ತಾಣಗಳಾದ ಕೆಆರ್ ಎಸ್, ಹಂಪಿ, ಬಾದಾಮಿ, ಶ್ರವಣಬೆಳಗೊಳ ಸೇರಿದಂತೆ ಇತರ ಪ್ರವಾಸಿ ಕೇಂದ್ರಗಳಲ್ಲೂ ಮಳಿಗೆಗಳನ್ನು ತೆರೆದು ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.

ಮೈಸೂರು ಸಿಲ್ಕ್ ಬ್ರಾಂಡ್ ನ ಉತ್ಕೃಷ್ಟತೆ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ ಮಹೇಶ್ ತಿಳಿಸಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮೈಸೂರು ಸಿಲ್ಕ್ ಹೆಸರಿನ ಪೇಟೆಂಟ್ ರಾಜ್ಯ ಸರ್ಕಾರದ್ದಾಗಿದ್ದು, ಖಾಸಗಿ ಒಡೆತನದ ಸಂಸ್ಥೆಗಳಾಗಲಿ ಅಥವಾ ಅಂಗಡಿಗಳಾಗಲಿ ಹೆಸರು ಬಳಕೆ ಮಾಡುವಂತಿಲ್ಲ ಎಂದು ಎಚ್ಚರಿಸಿದರು. 

ಹೀಗಾಗಿ ಮೈಸೂರು ಸಿಲ್ಕ್ ಹೆಸರು ಬಳಕೆ ಮಾಡಿ ಕಳಪೆ ದರ್ಜೆಯ ರೇಷ್ಮೆ ಸೀರೆ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ದಳ ನೇಮಕ ಮಾಡುವುದಾಗಿಯೂ ಮಹೇಶ ತಿಳಿಸಿದ್ದಾರೆ. ಅಲ್ಲದೆ ಅಂಥವರಿಗೆ ನೋಟಿಸ್ ನೀಡಿ ಎಚ್ಚರಿಸಿ ಅದಕ್ಕೂ ಬಗ್ಗದಿದ್ದರೆ ಕ್ರಿಮಿನಲ್ ಮುಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು. ಈ ಕ್ರಮ ಇಡೀ ದೇಶಕ್ಕೆ ಅನ್ವಯವಾಗಲಿದ್ದು ತಮಿಳುನಾಡಿನಲ್ಲಿ ಮೈಸೂರ್ ಸಿಲ್ಕ್ ಹೆಸರಿನಲ್ಲಿ ಸೀರೆ ಮಾರಾಟ ಮಾಡುವ ಅಂಗಡಿಗಳಿಗೂ ಎಚ್ಚರಿಕೆ ನೀಡಲಾಗುವುದು ಎಂದಿದ್ದಾರೆ.

click me!