ವಿಯೆಟ್ನಾಂ ಕರಿಮೆಣಸಿನಿಂದ ರಾಜ್ಯದ ರೈತರಿಗೆ ಕಷ್ಟ

Published : Nov 15, 2017, 01:27 PM ISTUpdated : Apr 11, 2018, 12:47 PM IST
ವಿಯೆಟ್ನಾಂ ಕರಿಮೆಣಸಿನಿಂದ ರಾಜ್ಯದ ರೈತರಿಗೆ ಕಷ್ಟ

ಸಾರಾಂಶ

ಆಮದು ಸುಂಕ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಮಲ್ಲಿಕಾರ್ಜುನ್

ವಿಧಾನಪರಿಷತ್: ವಿಯೆಟ್ನಾಂನಿಂದ ರಾಜ್ಯಕ್ಕೆ ಕಳಪೆ ಗುಣಮಟ್ಟದ ಕರಿಮೆಣಸು ಆಮದು ಆಗುತ್ತಿರುವುದರಿಂದ ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಬೆಳೆಗಾರರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆಮದು ಮೇಲಿನ ಸುಂಕ ಹೆಚ್ಚಳ ಮಾಡುವ ಮೂಲಕ ಆಮದು ನಿಯಂತ್ರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಯೆಟ್ನಾಂನಿಂದ ಕರಿಮೆಣಸು ಶ್ರೀಲಂಕಾ ಮೂಲಕ ಆಮದಾಗುತ್ತಿದೆ. ಹೀಗಾಗಿ ಆಮದು ಸುಂಕ ಕಡಿಮೆಯಾಗುತ್ತಿದ್ದು, ರಾಜ್ಯದ ಬೆಳೆಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದರು.

ಇದಕ್ಕೂ ಮೊದಲು ಮಾತನಾಡಿದ ವೀಣಾ ಅಚ್ಚಯ್ಯ, ರಾಜ್ಯದಲ್ಲಿ 20ಕ್ಕೂ ಹೆಚ್ಚು ವಿಧದ ಕರಿಮೆಣಸು ಬೆಳೆಯಲಾಗುತ್ತಿದೆ. ರಾಜ್ಯದ ಕರಿಮೆಣಸು ವಿಶ್ವ ಪ್ರಸಿದ್ಧಿಯಾಗಿದೆ. 2017ರ ಮಾರ್ಚ್‌ನಿಂದ ವಿಯೆಟ್ನಾಂನಿಂದ ಕರಿಮೆಣಸು ಆಮದು ಮಾಡಿಕೊಳ್ಳಲಾಗುತ್ತಿದೆ. ಕೊಡಗು ಬೆಳೆಗಾರರು ಬೆಳೆದ ಕರಿಮೆಣಸಿಗೆ ಕಳಪೆ ಕರಿಮೆಣಸು ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿರುವ ಕರಿಮೆಣಸಿಗೆ ಕೆಟ್ಟ ಹೆಸರು ಬರುತ್ತಿದೆ. ಜತೆಗೆ ಕೆ.ಜಿ.ಗೆ 700 ರು. ಇದ್ದ ಬೆಲೆ 350 ರು.ಗೆ ಬಿದ್ದು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 25 ಸಾವಿರ ಟನ್ ಕರಿ ಮೆಣಸು ಬೆಳೆಯಲಾಗುತ್ತಿದೆ. ಒಂದು ಸಾವಿರ ಕೋಟಿ ವಹಿವಾಟು ನಡೆಯುತ್ತದೆ. ಆದರೆ ಸಾರ್ಕ್ ಒಪ್ಪಂದದ ಪ್ರಕಾರ ಶ್ರೀಲಂಕಾದಿಂದ ಶೇ.11ರಷ್ಟು ಆಮದು ಸುಂಕದ ಮೇಲೆ ಆಮದು ಮಾಡಿಕೊಳ್ಳಬೇಕು. ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಆಮದು ಮಾಡಿಕೊಂಡರೆ ಶೇ.61ರಷ್ಟು ಆಮದು ಸುಂಕ ವಿಧಿಸಬಹುದು. ಆದರೆ ವ್ಯಾಪಾರಿಗಳು ವಿಯೆಟ್ನಾಂನಿಂದ ಶ್ರೀಲಂಕಾಗೆ ಹೋಗಿ ಶ್ರೀಲಂಕಾ ಮೂಲಕ ರಾಜ್ಯಕ್ಕೆ ತರುತ್ತಿದ್ದಾರೆ. ಇದರಿಂದ ಶೇ.36ರಷ್ಟು ಆಮದು ತೆರಿಗೆ ಭಾರ ಮಾತ್ರ ಅವರ ಮೇಲೆ ಬೀಳುತ್ತದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಉತ್ತರಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಗಣೇಶ್ ಕಾರ್ಣಿಕ್, ಆಮದು ಸುಂಕದ ಹೊರತಾಗಿ ಕಳಪೆ ಕರಿಮೆಣಸು ಮಾರಾಟದ ಬಗ್ಗೆಯೂ ವೀಣಾ ಅಚ್ಚಯ್ಯ ಗಮನ ಸೆಳೆದಿದ್ದಾರೆ. ಗುಣಮಟ್ಟ ನಿಯಂತ್ರಣಕ್ಕೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ. ಇದು ಗಂಭೀರ ಸಮಸ್ಯೆಯಾಗಿದ್ದು ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಅಷ್ಟು ಕಾಳಜಿ ಇರುವವರು ಹೋಗಿ ಕೇಂದ್ರದ ಬಳಿ ಆಮದು ನಿಯಂತ್ರಿಸಲು ಒತ್ತಡ ಹೇರಬೇಕು. ಕರಿಮೆಣಸು ಬೆಳಗಾರರ ಹಿತ ಕಾಯಲು ವಿವಿಧ ಯೋಜನೆಗಳನ್ನು ಮಾಡಿದ್ದೇವೆ. ಸಂಸ್ಕರಣೆಗಾಗಿ ಸಹಾಯಧನ, ಯಾಂತ್ರೀಕರಣ ಸೇರಿದಂತೆ ಹಲವು ಕ್ರಮ ಕೈಗೊಂಡಿದ್ದೇವೆ ಎಂದು ಸಮರ್ಥಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!