ಒಕ್ಕೂಟ ವ್ಯವಸ್ಥೆಯಲ್ಲಿ ಇಕ್ಕಟ್ಟಿಗೆ ಸಿಲುಕಿದೆ ರಾಜ್ಯ: ಕುಮಾರಸ್ವಾಮಿ

By Internet DeskFirst Published Sep 23, 2016, 4:37 PM IST
Highlights

ಬೆಂಗಳೂರು (ಸೆ.23):  ರಾಜ್ಯದ ಜನರಿಗೆ ಕುಡಿಯುವ ನೀರಿಲ್ಲದಿದ್ದರೂ ತಮಿಳುನಾಡಿನ ರೈತರ ಎರಡನೇ ಬೆಳೆಗೆ ನೀರು ಹರಿಸಬೇಕಾದ ಪರಿಸ್ಥಿತಿ ತಂದೊಡ್ಡಿರುವ ಸಂದಿಗ್ಧತೆ ಹಾಗೂ ಸವಾಲುಗಳನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಎಳೆ ಎಳೆಯಾಗಿ ಬಿಚ್ಚಿಟ್ಟರು. ನ್ಯಾಯಾಲಯದ ಆದೇಶದ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸದಿದ್ದರೂ ಸಾಮಾನ್ಯ ಜನರಲ್ಲಿ ನ್ಯಾಯಾಲಯಗಳ ಬಗ್ಗೆ ಅಭಿಪ್ರಾಯಗಳನ್ನೇ ಉಲ್ಲೇಖಿಸಿ ನೀರಿನ ಸಂಕಷ್ಟಚಿತ್ರಿಸಿದರು.

ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು ಎಂದಿನಂತೆ ಎಲ್ಲಿಯೂ ರಾಜ್ಯಸರ್ಕಾರವನ್ನು ಟೀಕಿಸಲಿಲ್ಲ. ಬದಲಿಗೆ ಸುಪ್ರೀಂ ಕೋರ್ಟ್‌ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯ ನಿರ್ದೇಶನ, ಆದೇಶಗಳಿಂದ ರಾಜ್ಯ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿರುವುನ್ನು ಒಪ್ಪಿಕೊಂಡು ಪ್ರಸ್ತಾಪಿಸುವ ಮೂಲಕ ಮುತ್ಸದ್ಧಿತನ ಮೆರೆದರು. ಒಕ್ಕೂಟ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮೊದಲಿನಿಂದಲೂ ಗೌರವ ನೀಡಿ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ಹಿರಿಮೆಯಿರುವ ರಾಜ್ಯ ಇದೀಗ ಪ್ರತಿಕೂಲ ಸನ್ನಿವೇಶದಲ್ಲಿ ನ್ಯಾಯಾಲಯದ ಆದೇಶವನ್ನೇ ಪಾಲಿಸಲಾಗದ ಸ್ಥಿತಿಗೆ ತಲುಪಿರುವುದನ್ನೂ ತೆರೆದಿಡುವ ಮೂಲಕ ರಾಜಕೀಯ ಮೀರಿದ ಕಳಕಳಿಯನ್ನು ಪ್ರದರ್ಶಿಸಿದರು.

Latest Videos

ರಾಜ್ಯದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ ಆದೇಶದಂತೆ ನೀರು ಹರಿಸದಿರಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆಯೇ ಹೊರತು ಒಕ್ಕೂಟದ ವ್ಯವಸ್ಥೆಗೆ ವಿರುದ್ಧವಾಗಿ ಇಲ್ಲವೇ ನ್ಯಾಯಾಂಗ ವ್ಯವಸ್ಥೆಯನ್ನೇ ಧಿಕ್ಕರಿಸುವ ಪ್ರಯತ್ನ ನಡೆಸಿಲ್ಲ ಎನ್ನುವ ಮೂಲಕ ಕುಮಾರಸ್ವಾಮಿ ಅವರು ಒಂದು ಹಂತದಲ್ಲೇ ತಮ್ಮದೇ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿಯಂತೆ ಭಾವುಕರಾಗಿ ವಿಷಯಗಳನ್ನು ಮಂಡಿಸಿದ್ದು ಗಮನ ಸೆಳೆಯಿತು. ಹಾಗೆಯೇ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನೂ ಉಲ್ಲೇಖಿಸಿ ಪರೋಕ್ಷವಾಗಿಯೇ ಕೇಂದ್ರದ ತಟಸ್ಥ ಧೋರಣೆಗೆ ಬೇಸರ ವ್ಯಕ್ತಪಡಿಸಿದರು.

ಹಕ್ಕು ಉಳಿಸಲು ಪೆಟ್ಟು:

ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಪಾಲಿಸಿಕೊಂಡೇ ಬಂದವರಿಗೆ ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಪಾಲಿಸಲಾಗದಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಪೆಟ್ಟು ತಿನ್ನುವಂತಾಗಿದೆ. ಕಾವೇರಿ ವಿಚಾರದಲ್ಲಿ ಮಧ್ಯಂತರ ಆದೇಶ ನೀಡುವ ನ್ಯಾಯಾಲಯವು, ಮಹದಾಯಿ ವಿಚಾರದಲ್ಲಿ ಮಧ್ಯಂತರ ಆದೇಶ ನೀಡುವಂತೆ ಕೇಳಿದರೂ ನೀಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಇದರಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಬಾಕಿಯಿದ್ದು, ಅ.18ಕ್ಕೆ ವಿಚಾರಣೆಗೆ ಬರಲಿದೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಅಟಾರ್ನಿ ಜನರಲ್‌ ಮೂಲಕ ವಿಶೇಷ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದಂತೆ ಮನವಿ ಮಾಡಲು ಸೂಚಿಸಬೇಕು ಎಂದು ಹೇಳಿದರು.

click me!