
ಬೆಂಗಳೂರು (ಡಿ.30): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಹಿಂದೆ ನೀಡಿದ್ದ ಹೋಂ ವರ್ಕ್‌ಗಳನ್ನು ರಾಜ್ಯ ಬಿಜೆಪಿ ಮುಖಂಡರು ಸರಿಯಾಗಿ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಪ್ರಗತಿ ಪರಿಶೀಲನೆ ನಡೆಸುವ ಸಂಬಂಧ ಬಿಜೆಪಿಯ ಹೆಡ್‌ಮಾಸ್ಟರ್ ಎಂದೇ ಖ್ಯಾತರಾಗಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯ ಸಿದ್ಧತೆಯಲ್ಲಿದ್ದ ರಾಜ್ಯ ಬಿಜೆಪಿ ಮುಖಂಡರಿಗೆ ಡಿ. 31ರಂದು ಆಗಮಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲು ಮುಂದಾಗಿರುವುದು ಸಹಜವಾಗಿಯೇ ಪ್ರಸಕ್ತ ಚಳಿಗಾಲದ ಚಳಿಗಿಂತಲೂ ಹೆಚ್ಚಿನ ನಡುಕ ಉಂಟು ಮಾಡಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆಯನ್ನು ಮುಗಿಸಿ ಬಿಡುವಾಗಿರುವ ಅಮಿತ್ ಶಾ ಅವರಿಗೆ ಮುಂದಿನ ಗುರಿ ಇರುವುದೇ ಕರ್ನಾಟಕ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಘೋಷಣೆ ಮೊಳಗಿಸಿದ್ದೇ ಅಮಿತ್ ಶಾ ಅವರು. ಹೀಗಾಗಿ, ತಮ್ಮದೇ ಆದ ಮೂಲಗಳಿಂದ ಕರ್ನಾಟಕದಲ್ಲಿನ ಸಮಗ್ರ ಬೆಳವಣಿಗೆಗಳ ಬಗ್ಗೆ ಸಂಗ್ರಹಿಸಿರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡೇ ಮುಖಂಡರನ್ನು ತರಾಟೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.
ನಗರದ ಯಲಹಂಕ ಬಳಿಯಿರುವ ರೆಸಾರ್ಟ್‌ವೊಂದರಲ್ಲಿ ಈ ಸಭೆ ನಡೆಯುವ ಸಾಧ್ಯತೆಯಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಸತತವಾಗಿ ವಿವಿಧ ಸಭೆಗಳನ್ನು ನಡೆಸುವ ಮೂಲಕ ಪರಿಶೀಲನೆ ನಡೆಸಲಿದ್ದಾರೆ. ಈ ಭೇಟಿಯೊಂದಿಗೆ ಅಮಿತ್ ಶಾ ವಿಧಾನಸಭಾ ಚುನಾವಣೆಯ ಸಿದ್ಧತೆಗೆ ಅಧಿಕೃತವಾಗಿ ಚಾಲನೆ ನೀಡಿದಂತಾಗುತ್ತದೆ.
ನಂತರದ ದಿನಗಳಲ್ಲಿ ಅಮಿತ್ ಶಾ ಅವರು ರಾಜ್ಯದ ಮೇಲೆ ನಿಗಾ ವಹಿಸಿ ಸತತವಾಗಿ ಭೇಟಿ ನೀಡುವ ನಿರೀಕ್ಷೆಯಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಮೂರು ದಿನಗಳ ಕಾಲ ಆಗಮಿಸಿದ್ದ ಅಮಿತ್ ಶಾ ಅವರು ಕೋರ್ ಕಮಿಟಿ ಸೇರಿದಂತೆ ಶಾಸಕರು, ಸಂಸದರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಮುಖ್ಯಸ್ಥರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿ ಯಾವ ವಿಭಾಗದವರು ಏನೆಲ್ಲ ಮಾಡಬಹುದು, ಏನೆಲ್ಲ ಮಾಡಬೇಕು ಎಂಬುದನ್ನು ಸೂಚಿಸಿದ್ದರು.
ಅಲ್ಲದೆ, ಅವರ ನಿರ್ದೇಶನದ ಅನ್ವಯವೇ ಪರಿವರ್ತನಾ ಯಾತ್ರೆ ಆರಂಭವಾಗಿ ಯಶಸ್ವಿಯಾಗಿ ಸಾಗಿದೆ. ಹೀಗಾಗಿ, ಆಯಾ ವಿಭಾಗಗಳು ಏನೇನು ಕೆಲಸ ಮಾಡಿವೆ, ಪರಿವರ್ತನಾ ಯಾತ್ರೆ ಇದುವರೆಗೆ ಸಾಗಿ ಬಂದಿರುವ ಹಾದಿ ಮತ್ತು ಅದರಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಅಮಿತ್ ಶಾ ಅವರ ತಂಡ ಸದ್ದಿಲ್ಲದೇ ಕರ್ನಾಟಕದಲ್ಲಿ ತನ್ನ ಕೆಲಸ ಆರಂಭಿಸಿದೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ಶಾ ಅವರ ಆಪ್ತ ಬಳಗ ಕರ್ನಾಟಕ ಬಿಜೆಪಿ ಮುಖಂಡರಿಗೂ ಗೊತ್ತಿಲ್ಲದಂತೆ ಸಂಚರಿಸಿ ಮಾಹಿತಿ ಹೆಕ್ಕಿ ತೆಗೆಯುತ್ತಿದ್ದಾರೆ. ಕ್ಷೇತ್ರವಾರು ಪ್ರವಾಸ ಮಾಡಿ ಪರಿಸ್ಥಿತಿ ಹೇಗಿದೆ? ಯಾವ ಪಕ್ಷಕ್ಕೆ ಅನುಕೂಲವಿದೆ? ಅದಕ್ಕೆ ಕಾರಣವೇನು? ಬಿಜೆಪಿಯಿಂದ ಯಾರು ಕಣಕ್ಕಿಳಿದರೆ ಸೂಕ್ತ? ಯಾರಿಗೆ ಜನ ಬೆಂಬಲವಿದೆ? ಪ್ರತಿಪಕ್ಷಗಳ ಬಲಾಬಲ ಏನು ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿಸುತ್ತಿರುವ ಮಾಹಿತಿಯ
ಮುಖ್ಯ ಭಾಗ ಶಾ ಕೈಸೇರಿದ್ದು, ಅದರ ಬಗ್ಗೆ ಅವರು ಇತರ ರಾಷ್ಟ್ರೀಯ ನಾಯಕರ ಜತೆ ಚರ್ಚೆಯನ್ನೂ ನಡೆಸಿದ್ದಾರೆ. ಇದೀಗ ಅದೆಲ್ಲವನ್ನೂ ಮುಂದಿಟ್ಟುಕೊಂಡು ರಾಜ್ಯ ಮುಖಂಡರೊಂದಿಗೆ ಸಮಾಲೋಚಿಸುವ ಮೂಲಕ ಎಲ್ಲೆಲ್ಲಿ ಲೋಪಗಳಿವೆ ಎಂದು ಹೇಳುವ ಸಂಭವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.