
ಶ್ರೀನಗರ[ಜೂ.18]: ಪುಟ್ಟ ಮಗುವನ್ನೆತ್ತಿಕೊಂಡು ಅಳುತ್ತಿರುವ ಶ್ರೀನಗರದ ಪೊಲೀಸ್ ಅಧಿಕಾರಿಯೊಬ್ಬರ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಪುಟ್ಟ ಹುಡುಗ ಯಾರು? ಇಲ್ಲಿದೆ ನೋಡಿ ಆ ವೈರಲ್ ಫೋಟೋ ಹಿಂದಿನ ಭಾವುಕ ಘಟನೆ.
ಪೊಲೀಸ್ ಅಧಿಕಾರಿಯ ಕೈಯ್ಯಲ್ಲಿರುವ ಆ ಮಗು, ಇದೇ ವಾರದಲ್ಲಿ ಜಮ್ಮು ಕಾಶ್ಮೀರದ ಅನಂತ್ತ್ಗ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಇನ್ಸಪೆಕ್ಟರ್ ಅರ್ಶದ್ ಖಾನ್‌ರವರದ್ದಾಗಿದೆ. ಸೋಮವಾರದಂದು ಹುತಾತ್ಮ ಪೊಲೀಸ್ ಅಧಿಕಾರಿಯ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ವೇಳೆ ಶ್ರೀನಗರದ SSP ಹಸೀಬ್ ಮೊಘಲ್, ಹುತಾತ್ಮ ಪೊಲೀಸ್ ಅಧಿಕಾರಿಯ 4 ವರ್ಷದ ಪುಟ್ಟ ಉಹ್ಬಾನ್‌ರನ್ನು ಎತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹುತಾತ್ಮ ಗೆಳೆಯನ ತಂಗಿ ಮದುವೆ ಮಾಡಿದ ಕಮಾಂಡೋಗಳು!
ಕಾಶ್ಮೀರದ ಪೊಲೀಸ್ ಅಧಿಕಾರಿ SHO ಅರ್ಶದ್ ಖಾನ್ ಜೂನ್ 12ರಂದು ಅನಂತ್ ನಾಗ್ ನಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆಗೆ ಸ್ಪಂದಿಸದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 'ಅಪ್ಪಂದಿರ ದಿನ'ದಂದೇ ಅವರ ಇಬ್ಬರು ಪುಟ್ಟ ಮಕ್ಕಳಾದ ಉಹ್ಬಾನ್ ಹಾಗೂ ದಾಮಿನ್ ಬಾಳಿನಿಂದ ತಂದೆಯ ನೆರಳು ಮಾಯವಾಗಿತ್ತು.
ಸೋಮವಾರದಂದು ಪೊಲೀಸ್ ಅಧಿಕಾರಿ ಖಾನ್ ಮೃತದೇಹವನ್ನು ಪೊಲೀಸ್ ಕಚೇರಿ ಆವರಣಕ್ಕೆ ತರಲಾಗಿತ್ತು. ಹುತಾತ್ಮ ಪೊಲೀಸ್ ಅಧಿಕಾರಿಯ 4 ವರ್ಷದ ಮಗ ಉಹ್ಬಾನ್ ಗೆ ತನ್ನ ತಂದೆ ಮರಳಲಾಗದ ಲೋಕಕ್ಕೆ ತೆರಳಿದ್ದಾರೆ ಎಂಬುವುದೂ ತಿಳಿದಿಲ್ಲ. ತಂದೆಯ ಅಂತಿಮ ವಿದಾಯದ ವೇಳೆ ತನ್ನ ಮಾವನ ಕೈ ಹಿಡಿದು ನಿಂತಿದ್ದ ಉಹ್ಬಾನ್, ಇಷ್ಟು ಚಿಕ್ಕ ವಯಸ್ಸಿನಲ್ಲೇ ಹಿರಿ ಮಗನ ಕರ್ತವ್ಯ ನಿಭಾಯಿಸಿದ್ದಾನೆ. ಏನೂ ಅರಿಯದ ಮಗ ಪೊಲೀಸ್ ಅಧಿಕಾರಿಗಳು ಹೇಳಿಕೊಟ್ಟಂತೆ ತಂದೆಯ ಪಾರ್ಥೀವ ಶರೀರದ ಬಳಿ ತೆರಳಿ ಸೆಲ್ಯೂಟ್ ಹೊಡೆದಿದ್ದಾನೆ. ಇದನ್ನು ಕಂಡ ಅಲ್ಲಿದ್ದ ಪೊಲೀಸರು ಈ ಭಾವುಕ ದೃಶ್ಯ ಕಂಡು ಕಣ್ಣೀರಾಗಿದ್ದಾರೆ.
ಹುತಾತ್ಮ SHO ಅರ್ಶದ್ ಅಹ್ಮದ್ ಖಾನ್ ಮತ್ತೊಬ್ಬ ಪುತ್ರ ಈಗಿನ್ನೂ 18 ತಿಂಗಳ ಮಗು. ಹೀಗಾಗಿ ಆತನನ್ನು ಈ ಅಂತಿಮ ಕ್ರಿಯೆಗೆ ಕರೆತಂದಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.