
ಧಾರವಾಡ: ಹಿಂದುತ್ವದ ತಳಹದಿಯ ಮೇಲೆ ಹೊಸ ರಾಷ್ಟ್ರೀಯ ಪಕ್ಷ ಕಟ್ಟಲು ಸಿದ್ಧತೆ ನಡೆಸುತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 24 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.
ಹೊಸ ಪಕ್ಷ ರಚನೆ ಸಲುವಾಗಿ ಈಗಾಗಲೇ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಸಂಘಟನಾ ಮುಖ್ಯಸ್ಥರೊಂದಿಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುವ ಅವರು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರು, ನಗರಾಧ್ಯಕ್ಷರಿಗೆ ಚುನಾವಣೆ ಎದುರಿಸಲು ಸಮರ್ಥ ಅಭ್ಯರ್ಥಿಗಳನ್ನು ಹುಡುಕಲು ಸೂಚನೆ ಸಹ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಆರೇಳು ಬಾರಿ ಸಮೀಕ್ಷೆ ನಡೆಸಲಾಗಿದೆ. 24 ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಗಟ್ಟಿಯಾಗಿದ್ದು ತಾವು ಸೇರಿದಂತೆ ಹಿಂದೂವಾದಿ ಹಾಗೂ ಪ್ರಾಮಾಣಿಕರು ಸ್ಪರ್ಧಿಸುವುದು ಖಚಿತ.
ಪ್ರಮೋದ್ ಮುತಾಲಿಕ್ ಶ್ರೀರಾಮ ಸೇನೆ
ದೇಶ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ನಾವೆಲ್ಲಾ ಪಣ ತೊಟ್ಟಿದ್ದೇವೆ. ಅದಕ್ಕೆ ಪ್ರಮೋದ ಮುತಾಲಿಕ ಅವರು ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ಅಥವಾ ತಾವು ಬಯಸಿದಂತೆ ಬಿಜೆಪಿಗೆ ಸೇರುವ ಮೂಲಕ ಸಹಕಾರ ನೀಡ ಬೇಕೆಂಬ ಮನವಿಯನ್ನು ಹಿಂದೆಯೂ ಮಾಡಿದ್ದೇನೆ. ಈಗಲೂ ಮಾಡುತ್ತೇನೆ. ಇದನ್ನು ಮೀರಿ ಚುನಾವಣೆ ಎದುರಿಸಿದರೂ ಬಿಜೆಪಿ ಅವರನ್ನು ಎದುರಿಸಲಿದೆ
ಪ್ರಹ್ಲಾದ ಜೋಶಿ, ಸಂಸದ
ಹಿಂದುತ್ವಕ್ಕಾಗಿ ರಾಜಕೀಯ: ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್ ಅವರು, ಹಿಂದುತ್ವದ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಹಿಂದುತ್ವದಿಂದ ವಿಮುಖವಾಗಿರುವುದು ಬೇಸರ ಮೂಡಿಸಿದೆ. ಹೀಗಾಗಿ ಹಿಂದುತ್ವಕ್ಕಾಗಿ ರಾಜಕೀಯ ಎಂಬ ಘೋಷಣೆಯಡಿ ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆಯಾಗಲಿದ್ದು ಹೆಸರು ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ.
ಆದರೆ ಹುಬ್ಬಳ್ಳಿಯಲ್ಲಿ ನಡೆದಿರುವ ಸಭೆಯಲ್ಲಿ ಹೊಸ ಪಕ್ಷಕ್ಕೆ ‘ರಾಷ್ಟ್ರೀಯ ಕೇಸರಿ ಪಡೆ ಪಕ್ಷ’ ಎಂದು ಹೆಸರಿಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.